Saturday, 14th December 2024

ಲಸಿಕೆಯೊಂದೇ ಪರಿಹಾರ

#Vaccine

ಭಾರತ ಮೂರನೇ ಅಲೆಯ ಕರೋನಾ ಆತಂಕದಲ್ಲಿದೆ. ವಿಶ್ವದ ಕೆಲ ದೇಶಗಳಲ್ಲಿ ನಾಲ್ಕನೇ ಅಲೆಯೂ ಕಾಣಿಸಿ ಕೊಳ್ಳುತ್ತಿದೆ. ಇಡೀ ವಿಶ್ವದ ವೈದ್ಯಕೀಯ ಹಾಗೂ ಔಷಧ ಕ್ಷೇತ್ರ ಕರೋನಾ ವಿರುದ್ಧದ ಹೋರಾಟಕ್ಕೆ ಅವಿರತ ಹೋರಾಟ ನಡೆಸಿ, ಹಲವು ಪ್ರಯೋಗ ನಡೆಯುತ್ತಿದ್ದರೂ, ಆ ಎಲ್ಲವನ್ನು ಮೀರಿ ರೂಪಾಂತರಿ ಕರೋನಾ ವೈರಾಣು ಭಾರಿ ಆತಂಕವನ್ನು ಸೃಷ್ಟಿಸಿದೆ.

ಆತಂಕದಲ್ಲಿಯೇ ಜೀವನ ಸಾಗಿಸುತ್ತಿರುವ ಎಲ್ಲರಿಗೂ ಕರೋನಾದಿಂದ ಮುಕ್ತಿ ಎನ್ನುವ ಪ್ರಶ್ನೆ ಕಾಡುತ್ತಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಸೇರಿದಂತೆ ಬಹುತೇಕ ತಜ್ಞರು, ‘ಕರೋನಾದೊಂದಿಗೆ ಜೀವಿಸುವುದನ್ನು ಕಲಿಯಬೇಕು. ಲಾಕ್‌ಡೌನ್, ಸೆಮಿ ಲಾಕ್‌ಡೌನ್ ಸೇರಿದಂತೆ ಈಗ ಹೇರುತ್ತಿರುವ ಎಲ್ಲ ನಿರ್ಬಂಧಗಳು ತಾತ್ಕಲಿಕ’ ಎನ್ನುವ ಮಾತನ್ನು ಹೇಳಿದ್ದಾರೆ.

ಹಾಗಾದರೆ, ಕರೋನಾ ವಿರುದ್ಧದ ಹೋರಾಟಕ್ಕೆ ಶಾಶ್ವತ ಪರಿಹಾರ ಏನು ಎನ್ನುವ ಪ್ರಶ್ನೆಗೆ ಉತ್ತರ ‘ಲಸಿಕೆ’. ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಲಸಿಕಾ ಅಭಿಯಾನವನ್ನು ಭಾರಿ ವೇಗವಾಗಿ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕೆಲವರು ಹೆದರಿಕೆ ಯಿಂದಲೋ ಅಥವಾ ಇನ್ಯಾವುದೋ ಕಾರಣಕ್ಕೆ ಲಸಿಕೆ ಹಾಕಿಸಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಈಗಾಗಲೇ ಮಕ್ಕಳಿಗೆ ಲಸಿಕೆ ಬಂದಿರುವುದಷ್ಟೇ ಅಲ್ಲದೇ, ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ಸಹ ಹಾಕಲಾಗುತ್ತಿದೆ. ಲಸಿಕೆ ಪಡೆಯುವುದರಿಂದ ಕರೋನಾ ಬರುವುದೇ ಇಲ್ಲ ಎಂದಲ್ಲ. ಆದರೆ ಲಸಿಕೆ ಪಡೆಯದ ವ್ಯಕ್ತಿಗೆ ಹೋಲಿಸಿದರೆ, ಲಸಿಕೆ ಹಾಕಿಸಿಕೊಂಡ ವ್ಯಕ್ತಿಗೆ ಸೋಂಕು ಹೆಚ್ಚು ಬಾಽಸುವುದಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕರು ಕರೋನಾ ಲಸಿಕೆಯನ್ನು ತಪ್ಪದೇ ಪಡೆಯಬೇಕು. ರಾಜ್ಯ ಸರಕಾರದ ಒತ್ತಡಕ್ಕೆ ಅಥವಾ ಪ್ರಮಾಣ ಪತ್ರದ ಸಲುವಾಗಿಯೋ ಲಸಿಕೆ ಹಾಕಿಸಿಕೊಳ್ಳದೇ, ನಮ್ಮವರಿಗಾಗಿ ಹಾಗೂ ನಮ್ಮ ಜತೆಯಲ್ಲಿರುವವರ ಆರೋಗ್ಯ ದೃಷ್ಠಿಯಿಂದ ಲಸಿಕೆಯನ್ನು ಹಾಕಿಸಿಕೊಳ್ಳಬೇಕು.