Wednesday, 18th September 2024

ವೈರಿ ರಾಷ್ಟ್ರಕ್ಕೆ ಜೈ ಎಂದವರಿಗೆ ಕಠಿಣ ಶಿಕ್ಷೆಯಾಗಲಿ

ರಾಜ್ಯಸಭಾ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್‌ನ ಸೈಯ್ಯದ್ ನಾಸಿರ್ ಹುಸೇನ್ ಅವರ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಎಫ್ ಎಸ್‌ಎಲ್ ವರದಿ, ಸ್ಥಳದ ಸಾಕ್ಷ್ಯಗಳು ಹಾಗೂ ಸಾಕ್ಷಿ ಹೇಳಿಕೆ ಆಧಾರದ ಮೇಲೆ ದೆಹಲಿ ಮೂಲದ ಇಲ್ತಾಜ್, ಬೆಂಗಳೂರಿನ ಆರ್.ಟಿ.ನಗರ ಮೂಲದ ಮುನಾವರ್, ಹಾವೇರಿ ಜಿ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಪಾಕ್ ಪರ ಘೋಷಣೆಗಳು ರಾಜ್ಯದ ಅನೇಕ ಸ್ಥಳಗಳಲ್ಲಿ ಈ ಹಿಂದೆ ಕೇಳಿಬಂದಿದ್ದವು. ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಗಲಾಟೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಹಲವು ಕಡೆ ಕೇಳಿಬಂದಿತ್ತು. ಆದರೆ, ಇದೇ ಮೊದಲ ಬಾರಿಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆಗಳು ಕೇಳಿಬಂದಿವೆ. ಇದು ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಮುಜುಗರ ಉಂಟು ಮಾಡಿದೆ. ಈಗ ಬಂಧನವಾಗಿರುವ ಮೂವರೂ ಕಾಂಗ್ರೆಸ್ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ.

ಆದರೆ ಮೂವರೂ ಬೇರೆ ಬೇರೆ ಸ್ಥಳದವರಾಗಿದ್ದರಿಂದ ಇದರ ಹಿಂದೆ ಜಾಲವೇ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಬಂಧಿತರು ನಿಜವಾಗಲೂ ನಾಸೀರ್ ಹುಸೇನ್ ಅವರ ಬೆಂಬಲಿಗರಾ? ಅಥವಾ ಈ ರೀತಿ ಕೂಗುವುದಕ್ಕಂತಲೇ ವಿಧಾನಸೌಧಕ್ಕೆ ಬಂದಿದ್ದರಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಘೋಷಣೆ ಕೂಗಿರುವುದರ ಹಿಂದೆ ಯಾವುದಾದರೂ ಸಂಘ ಟನೆಯ ಕೈವಾಡ ಇದೆಯಾ ಎಂಬುದನ್ನು ಕೂಡ ತನಿಖೆ ಬಹಿರಂಗಪಡಿಸಬೇಕಿದೆ.

ಅಲ್ಲದೆ, ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಬಂಧಿತರಾದ ಅನೇಕರು ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಹೊರಗೆ ಬಂದು ರಾಜಾರೋಷವಾಗಿ ಇದ್ದಾರೆ. ಆದ್ದರಿಂದಲೇ ಇಂತಹ ಕೃತ್ಯಗಳು ಮರುಕಳುಹಿಸುತ್ತಿವೆ. ಆದ್ದರಿಂದ ದೇಶ ವಿರೋಧಿ ಘೋಷಣೆ ಕೂಗುವ ಮೂಲಕ ಸಾರ್ವಜನಿಕ ಸುವ್ಯವಸ್ಥೆ ಯನ್ನು ಹಾಳುಗೆಡಹುವ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ಮುಂದೆ ದೇಶ ವಿರೋಧ ಘೋಷಣೆ ಕೂಗುವವರಿಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬ ಸಂದೇಶ ರವಾನೆಯಾಗಬೇಕು.

Leave a Reply

Your email address will not be published. Required fields are marked *