Wednesday, 11th December 2024

ಪಂಚ ಸೂತ್ರ ರಚನೆ ಪಾಲಿಸದಿದ್ದರೆ ಅಪಾಯ

ಕೆಲವು ರಾಜ್ಯಗಳಲ್ಲಿ ಕರೋನಾ ಪ್ರಕರಣಗಳ ಉಲ್ಬಣಕ್ಕೆ ವೈರಾಣುವಿನ ರೂಪಾಂತರಿ ತಳಿಗಳು ಕಾರಣವಾದರೂ ಸಾಂಕ್ರಾಮಿಕ ರೋಗಗಳ ನಿಯಂತ್ರಿಸುವ ಕ್ರಮಗಳು ಒಂದೇ.

ಆದ್ದರಿಂದ ಜನರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವ ಸಾಮಾಜಿಕ ಜನಾಂದೋಲನದ ಅಗತ್ಯ
ಎಂಬುದು ಪ್ರಧಾನಿಯವರ ಅಭಿಪ್ರಾಯ. ಪರೀಕ್ಷೆ-ಸೋಂಕಿತರ ಪತ್ತೆ – ಚಿಕಿತ್ಸೆ – ಸೂಕ್ತನಡವಳಿಕೆ ಹಾಗೂ ಲಸಿಕೆ ಎಂಬ ಐದು ಕಾರ್ಯತಂತ್ರಗಳ ಆಧಾರದಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸಲು ಎಲ್ಲ ರಾಜ್ಯಗಳಿಗೂ ಕರೆ ನೀಡಿದ್ದಾರೆ.

ಪ್ರಸ್ತುತ ಈ ಕರೆಯನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಕೋವಿಡ್ ವಿಚಾರದಲ್ಲಿ ಭಾರತದ ಸಾಧನೆಯನ್ನು ಅವಲೋಕಿಸಿದರೆ ಮಹತ್ವದನ್ನು ಸಾಧಿಸಿರುವುದನ್ನು ಗಮನಿಸಬಹುದಾಗಿದೆ. ಒಂದೇ ಬಾರಿಗೆ ಎರಡು ಲಸಿಕೆಗಳನ್ನು ಬಿಡುಗಡೆ ಗೊಳಿಸುವುದರ ಜತೆಗೆ ೭೫ಕ್ಕೂ ಅಧಿಕ ರಾಷ್ಟ್ರಗಳಿಗೆ ಕೋಟಿ ಡೋಸ್ ಲಸಿಕೆ ರಫ್ತು ಮಾಡಿದ ಹೆಗ್ಗಳಿಕೆ ಭಾರತದ್ದು. ಆದರೆ ಅನಿರೀಕ್ಷಿತವಾಗಿ ಎದುರಾದ ಎರಡನೆಯ ಅಲೆ ಪರಿಣಾಮದಿಂದ ನಮ್ಮ ದೇಶದಲ್ಲಿ ಲಸಿಕೆಯ ಅಗತ್ಯತೆ ಹೆಚ್ಚಲಿದೆಯೇ ಎಂಬ ಆತಂಕ ಇದೀಗ ವ್ಯಕ್ತವಾಗುತ್ತಿದೆ.

ಇದಕ್ಕೆ ಕಾರಣ ಇತ್ತೀಚೆಗೆ ಮಹಾರಾಷ್ಟ್ರದ ಉಂಟಾಗಿರುವ ಸಂಕಷ್ಟ. ಮಹಾರಾಷ್ಟ್ರ ಸರಕಾರ ಲಸಿಕೆ ವಿಚಾರವಾಗಿ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದೆ. ೭.೫ಲಕ್ಷ ಡೋಸ್ ಲಸಿಕೆ ನೀಡಲಾಗಿದ್ದ ಕೇಂದ್ರದ ವಿರುದ್ಧ ಮಹಾರಾಷ್ಟ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದರಿಂದ ಲಸಿಕೆ ಪ್ರಮಾಣವನ್ನು ೧೭ಲಕ್ಷಕ್ಕೆ ಏರಿಸಲಾಗಿದೆ. ಆದರೆ ೫೦ ಸಾವಿರ ಸಕ್ರಿಯ ಪ್ರಕರಣಗಳಿರುವುದರಿಂದ ೪೦ಲಕ್ಷ ಲಸಿಕೆ ನೀಡಬೇಕೆಂಬುದು ಮಹಾರಾಷ್ಟ್ರದ ಒತ್ತಾಯ. ಈ ವೇಳೆ ಪಕ್ಕದ ರಾಜ್ಯ ಮಹಾರಾಷ್ಟ್ರದ ಸ್ಥಿತಿಯನ್ನು ಗಮನಿಸಿದರೆ, ರಾಜ್ಯದಲ್ಲಿ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಿರುವ ಸ್ಥಿತಿ ನಿರ್ಮಾಣಗೊಂಡಿದೆ.

ಕರೋನಾದ ಆರಂಭಿಕ ದಿನಗಳಲ್ಲಿ ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸದಂತೆ ಪ್ರಸ್ತುತ ರಾಜ್ಯದಲ್ಲಿ ಸಾಮಾಜಿಕ ಅಂತರ ಕಡಿಮೆಯಾಗದಿದ್ದರೆ ಅಪಾಯದ ಸ್ಥಿತಿ ಎದುರಾಗುವ ಸಾಧ್ಯತೆಗಳು ಗೋಚರವಾಗುತ್ತಿದೆ.