Saturday, 14th December 2024

ಜನಪ್ರತಿನಿಧಿಗಳ ನೈತಿಕತೆಯ ಪ್ರಶ್ನೆ

ಸಾರ್ವಜನಿಕ ಜೀವನದಲ್ಲಿ ಇರುವವರು ಇನ್ನೊಬ್ಬರಿಗೆ ಮಾದರಿಯಾಗುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಅದರಲ್ಲಿಯೂ
ರಾಜಕೀಯ ಜೀವನದಲ್ಲಿರುವವರು, ಜನರಿಂದ ಆಯ್ಕೆಯಾಗುವವರಿಂದ ಇದನ್ನು ನಿರೀಕ್ಷೆ ಮಾಡುವುದು ಸಹಜ.

ಆದರೆ ಇತ್ತೀಚಿಗೆ ಎಲ್ಲೋ ಒಂದು ಕಡೆ ಇದು ಹಳಿ ತಪ್ಪುತ್ತಿದ್ದೆಯೇ ಎನ್ನುವ ಅನುಮಾನಗಳು ಶುರುವಾಗುತ್ತಿದೆ. ಕೆಲ ತಿಂಗಳ ಹಿಂದೆ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದಾಗ ಎಲ್ಲರೂ ಹೌಹಾರಿದರು. ಇಡೀ ದೇಶಕ್ಕೆ ಮಾದರಿಯಂತಿರುವ ಕರ್ನಾಟಕ ರಾಜಕೀಯದಲ್ಲಿ ಈ ರೀತಿಯ ಘಟನೆಯನ್ನು ಯಾರೂ ಊಹಿಸಿರಲಿಲ್ಲ.

ಇದು ಇಷ್ಟಕ್ಕೆ ನಿಲ್ಲದೇ, ಈ ಕೃತ್ಯದಲ್ಲಿ ಕಾಂಗ್ರೆಸ್ ಪಕ್ಷದವರ ಕೈವಾಡವಿದೆ ಎಂದು ಮಾಹಿತಿ ಬಂದಾಗ ರಾಜಕೀಯ ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆಗಳನ್ನು ಅನೇಕರು ಎತ್ತಿದ್ದರು. ಇದೀಗ ಪೊಲೀಸರು ಈ ಘಟನೆಯ ಪ್ರಮುಖ ಆರೋಪಿಯಾಗಿರುವ ಸಂಪತ್ ರಾಜ್ ಅವರನ್ನು ಬಂಧಿಸಿದ್ದಾರೆ. ಅವರ ಆರೋಪವಿನ್ನೂ ಸಾಬೀತಾಗಿಲ್ಲ. ಆದರೆ ಬೆಂಗಳೂರು ಮಹಾನಗರದ ಮಹಾಪೌರರಾಗಿ,
ನಗರ ಪ್ರಥಮ ಪ್ರಜೆಯಾಗಿದ್ದ ಅವರ ಮೇಲೆ ಈ ರೀತಿ ಆರೋಪ ಬಂದಿರುವುದಷ್ಟೇ ಅಲ್ಲದೇ, ತಪ್ಪಿತಸ್ಥರ ರೀತಿ ತಲೆಮರೆಸಿ ಕೊಂಡಿದ್ದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ನಾಲ್ಕು ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ನೀಡಿದೆ. ಸಂಪತ್‌ರಾಜ್ ಅವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೋ ಇಲ್ಲವೋ ಎನ್ನುವುದನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಆದರೆ ಅದಕ್ಕೂ ಮೊದಲು, ನೈತಿಕವಾಗಿ ತಲೆಮರೆಸಿಕೊಂಡಿದ್ದು ಎಷ್ಟು ಸರಿ ಎನ್ನುವುದನ್ನು ಯೋಚಿಸಬೇಕಿದೆ. ಮಾದರಿಯಾಗಬೇಕಿರುವ ಜನಪ್ರತಿನಿಧಿ ಜೈಲಿಗೆ ಹೋಗಿ ಬಂದರೆ ಅವರಿಗೆ
ಮೆರವಣಿಗೆ ಮೂಲಕ ಸ್ವಾಗತಿಸುವ ಘಟನೆಗಳೂ ದೇಶದಲ್ಲಿ ನಡೆಯುತ್ತಿದೆ. ಈ ಎಲ್ಲವನ್ನು ಗಮನಿಸಿದಾಗ ರಾಜಕೀಯದಲ್ಲಿರುವ ನೈತಿಕ ದಿವಾಳಿತನದ ಬಗ್ಗೆ ಪ್ರಶ್ನೆ ಮೂಡುವುದರಲ್ಲಿ ಅನುಮಾನವಿಲ್ಲ.