Saturday, 14th December 2024

ಸಂದಿಗ್ಧ ಕಾಲದ ಸಮರ್ಪಕ ಬಜೆಟ್

ರಾಜ್ಯದ 2020-21ನೇ ಸಾಲಿನ ಬಜೆಟ್ ಬಗ್ಗೆ ಜನರ ನಿರೀಕ್ಷೆಗಳು ಬಹಳಷ್ಟು. ಮುಖ್ಯವಾಗಿ ಈ ಬಾರಿ ನಿರೀಕ್ಷೆಗಳು ಹೆಚ್ಚಲು ಇರುವ ಕಾರಣ, ಕರೋನಾದಿಂದಾಗಿ ಜನರಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟ, ನಿರುದ್ಯೋಗಗಳು ಪ್ರಮುಖ.

ಇದೇ ರೀತಿ ಸರಕಾರದ ಆರ್ಥಿಕ ಕುಸಿತಕ್ಕೆ ಕಾರಣವಾಗಿದ್ದು ಕೋವಿಡ್ ಸಮಸ್ಯೆ ಹಾಗೂ ಉತ್ತರ ಕರ್ನಾಟಕದಲ್ಲಿ ಕಂಡುಬಂದ ಪ್ರವಾಹ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಬಜೆಟ್ ಮಂಡನೆ ಸವಾಲಿನ ಸಂಗತಿ. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಅವರು ಮೂರು ಮುಖ್ಯ ವಿಷಯಗಳಿಗೆ ಆದ್ಯತೆ ನೀಡುವ ಮೂಲಕ ಸಂದಿಗ್ಧ ಸ್ಥಿತಿಯಲ್ಲಿ ಸಮರ್ಪಕ ಬಜೆಟ್ ಮಂಡಿಸಿದ್ದಾರೆ. ಕೃಷಿ – ಮಹಿಳೆ – ಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಈ ಬಾರಿ ಬಜೆಟ್‌ನ ಪ್ರಮುಖಾಂಶಗಳು.

ಕೃಷಿ ಹಾಗೂ ಪೂರಕ ಚಟುವಟಿಕೆಗೆ ಒಟ್ಟಾರೆ 31028 ಕೋಟಿ. ರು. ಮೀಸಲಿರಿಸಿದ್ದಾರೆ. ಈ ಮೂಲಕ ರೈತ ನಾಯಕರಾಗಿ ಗಳಿಸಿದ ಸ್ಥಾನಮಾನಕ್ಕೆ ಬದ್ಧತೆ ತೋರಿದ್ದಾರೆ. ಮಹಿಳೆಯರಿಗೆ ಆರು ತಿಂಗಳು ಪ್ರಸೂತಿ ರಜೆಯ ಜತೆಗೆ ಮಕ್ಕಳ ಆರೈಕೆಗಾಗಿ ಆರು ತಿಂಗಳ ಆರೈಕೆ ರಜೆ, 60 ಸಾವಿರ ಮಹಿಳೆಯರ ಸ್ವಯಂ ಉದ್ಯೋಗ ಸೃಷ್ಟಿಗೆ ಆದ್ಯತೆ, ಗಾರ್ಮೆಂಟ್ಸ್ ಉದ್ಯಮದ ಮಹಿಳೆಯರಿಗಾಗಿ 30 ಕೋಟಿ ವೆಚ್ಚಗೊಳಿಸಿ ವನಿತಾ ಸಂಗಾತಿ ಹೆಸರಿನ ರಿಯಾಯಿತಿ ದರದ ಬಸ್ ಪಾಸ್ ಯೋಜನೆ ಸೇರಿದಂತೆ ಹಲವು
ಯೋಜನೆ ಗಳನ್ನು ಘೋಷಿಸಿದ್ದಾರೆ.

ಉಳಿದಂತೆ ಹಲವು ಸಮುದಾಯಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಮಠಗಳಿಗೂ ಸೂಕ್ತ ಅನುದಾನ ಘೋಷಿಸಲಾಗಿದೆ. ಉಳಿದಂತೆ ಕೈಗಾರಿಕೆ ಹಾಗೂ ಯುವ ಸಮುದಾಯದ ಪ್ರಗತಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆದ್ಯತೆ ದೊರೆತಿಲ್ಲ ಎಂದೆನಿದರೂ
ಪ್ರಸ್ತುತದ ಸಂದಿಗ್ಧ ಕಾಲದಲ್ಲಿ ಇದೊಂದು ಸಮರ್ಪಕ ಬಜೆಟ್.