ಬೆಳಗಾವಿಯ ಕೋಟೆ ಕರೆಯ ಉದ್ಯಾನದಲ್ಲಿ ಶನಿವಾರ ಸಂಜೆ ಮಾತನಾಡುತ್ತ ಕುಳಿತಿದ್ದ ಅಕ್ಕ-ತಮ್ಮನನ್ನು ಪ್ರೇಮಿಗಳೆಂದು ತಿಳಿದು ಗುಂಪೊಂದು ಅಪಹರಿಸಿಕೊಂಡು ಹೋಗಿ ತೀವ್ರ ಹಲ್ಲೆ ಮಾಡಿದ್ದು ಅಮಾನವೀಯ ಘಟನೆ. ಯಾವುದೇ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿಯನ್ನು ಹತ್ತಿಕ್ಕಲಾಗುವುದು ಎಂದು ಹೇಳಿದ್ದರೂ ಮತ್ತೆ ಮತ್ತೆ ಘಟನೆಗಳು ನಡೆದು ಸಾಮಾಜಿಕ ಸಾಮರಸ್ಯ ಹಾಳಾಗುತ್ತಲೇ ಇದೆ.
ಆದರೆ ಸರಕಾರದ ಭರವಸೆ ಬರೀ ಭರವಸೆಯಾಗಿಯೇ ಉಳಿದಿದೆ. ನೈತಿಕ ಪೊಲೀಸ್‌ಗಿರಿ ಹುಟ್ಟು ಬೆಳವಣಿಗೆ, ಜತೆಗೆ ಇದು ಉಂಟು ಮಾಡಿರುವ ಸಮಸ್ಯೆಗಳ ಬಗ್ಗೆ ಸದ್ಯಕ್ಕೆ ವಿಮರ್ಶೆ ಮಾಡಬೇಕಾಗಿದೆ. ನಾವು ಬದುಕುವ, ಬದ್ಧವಾಗಿರುವ ಕಾನೂನು ಮಿತಿಯಲ್ಲಿ ರಕ್ಷಿಸಿಕೊಳ್ಳುವ ಎಲ್ಲ ಹಕ್ಕು ಸಂವಿಧಾನಬದ್ಧ ವಾಗಿಯೇ ಬಂದಿರುವುದು ನಿಜ. ಆದರೆ, ಜಾತಿ ವ್ಯವಸ್ಥೆ ಮತ್ತು ಧಾರ್ಮಿಕ ಕಟ್ಟುಪಾಡುಗಳು, ಪರಂಪರೆ-ಸಂಪ್ರದಾಯಗಳ ನಂಬಿಕೆಯಲ್ಲಿರುವ ಕಟ್ಟು ಪಾಡು ಮತ್ತು ಆಚರಣೆಯ ಭಿನ್ನತೆ ನಡುವೆ ಉಂಟಾದ ಸಂಘರ್ಷದಿಂದಾಗಿ ನೈತಿಕ ಪೊಲೀಸ್‌ಗಿರಿ ಜನ್ಮ ತಾಳಿದೆ.
ನೈತಿಕ ಪೊಲೀಸ್‌ಗಿರಿ ಎನ್ನುವುದು ಅನೈತಿಕ ಗೂಂಡಾಗಿರಿಗಿಂತ ಭಿನ್ನವಲ್ಲ. ಇಂಥ ಗೂಂಡಾಗಳನ್ನು ಜಾತಿ, ಧರ್ಮಗಳ ಭೇದವಿಲ್ಲದೆ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು. ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಅತಿರೇಕಕ್ಕೆ ಇಳಿಯುತ್ತಿರುವ ವ್ಯಕ್ತಿಗಳು ಇಲ್ಲವೆ ಸಂಘಟನೆಗಳ ಚಲನವಲನಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕು. ಬೆಳಗಾವಿಯಲ್ಲಿ ನಡೆದ ಘಟನೆ ಕುರಿತು ಈಗಾಗಲೇ ೮ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ವಿಚಾರಣೆ ನಡೆಸಿದಾಗ’ ೭೦ರಿಂದ ೮೦ ಜನರಿಗೆ ಇದೇ ರೀತಿ ಹೊಡೆದಿದ್ದೇವೆ’ ಎಂದು ಹೇಳಿದ್ದಾರೆ.
ಅದಕ್ಕಾಗಿಯೇ ಅವರೊಂದು ಶೆಡ್ ಮಾಡಿಕೊಂಡಿzರೆ ಎನ್ನಲಾಗಿದೆ. ಅಂದರೆ ಇದರ ಹಿಂದೆ ದೊಡ್ಡ ಜಾಲವೇ ಇದೆ. ಹಾಗಾಗಿ ಈ ಬಗ್ಗೆ ವಿಶೇಷ ತನಿಖೆ ಗಾಗಿ ಆದೇಶಿಸಬೇಕು. ರಾಜ್ಯ ಸರಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಪಾಠ ಕಲಿಸುವ ನಿಟ್ಟಿ ನಲ್ಲಿ ಕ್ರಮ ಕೈಗೊಳ್ಳಬೇಕು. ಇನ್ನು ಇಂತಹ ಘಟನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿ ಭಯದ ವಾತಾವರಣ ಸೃಷ್ಟಿಸುವ, ಸೌಹಾರ್ದ ಕೆಡಿಸುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.