ಮತ್ತೊಂದು ಹುಲಿ ದಿನವನ್ನು ಮುಗಿಸಿದ್ದೇವೆ. ತಾನಾಯಿತು, ತನ್ನ ಬೇಟೆಯಾಯಿತು ಎಂಬಂತೆ ಇರುವ, ಕಾಡಿನಲ್ಲಿ ಬಲಿಷ್ಠ ಎನಿಸಿಕೊಂಡಿರುವ, ನಾವು ರಾಷ್ಟ್ರಪ್ರಾಣಿಯೆಂದು ಗುರುತಿಸುವ ಹುಲಿಗಳ ಸ್ಥಿತಿ ಅಷ್ಟೇನೂ ಆಶಾದಾಯವಾಗಿ ಉಳಿದಿಲ್ಲ.
ಶತಮಾನದ ಹಿಂದೆ ಸುಮಾರು 1 ಲಕ್ಷ ಹುಲಿಗಳು ಪ್ರಪಂಚದಾದ್ಯಂತ ಕಾಡುಗಳನ್ನು ಆಳಿದವು. ಆದರೆ 21ನೇ ಶತಮಾನದ ಹೊತ್ತಿಗೆ ಕೇವಲ 13 ದೇಶಗಳಲ್ಲಿ ಹುಲಿಗಳ ಸಂಖ್ಯೆ 4 ಸಾವಿರಕ್ಕೆ ಇಳಿಯಿತು. ಪಾರಿಸಾರಿಕ, ಜೈವಿಕ ಸಮತೋಲನದ ದೃಷ್ಟಿಯಿಂದ ಅತ್ಯಂತ ಪ್ರಮುಖ ಪಾತ್ರವಹಿಸುವ ಹುಲಿಗಳ ಇಂಥ ದೈನ್ಯ ಸ್ಥಿತಿಯ ನಡುವೆಯೇ ಅಂತಾರಾಷ್ಟ್ರೀಯ ಹುಲಿ ದಿನವಂತೂ ಸಂಪನ್ನಗೊಂಡಿದೆ.
ಸಂರಕ್ಷಣೆಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲೆಂದೇ ಪ್ರತಿ ವರ್ಷ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತಿರುವುದು ನಿಜ. ಆದರೆ, ಅಂಥ ಜಾಗೃತಿಯ ಉದ್ದೇಶ ಈಡೇರುತ್ತಿದ್ದಂತೆ ಕಾಣುತ್ತಿಲ್ಲ. ಹೀಗಾಗಿಯೇ ಈ ಅಪರೂಪದ ಪ್ರಾಣಿ ಸಂತತಿಯನ್ನು ಇಂದು ನಾವು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭಾರತದ್ದೇ ಉದಾಹರಣೆ ತೆಗೆದು ಕೊಂಡರೆ ನಮ್ಮಲ್ಲಿ ಕಳೆದ 10 ವರ್ಷಗಳಲ್ಲಿ 1 ಸಾವಿರಕ್ಕೂ ಹೆಚ್ಚು ಹುಲಿ ಗಳನ್ನು ಕಳೆದುಕೊಂಡಿದ್ದೇವೆ.
ಅರಣ್ಯನಾಶ, ಬೇಟೆ, ಅವುಗಳ ಆವಾಸಸ್ಥಾನದಲ್ಲಿನ ಇಳಿಕೆ, ಆನುವಂಶಿಕ ವೈವಿಧ್ಯದ ನಾಶ, ಹೆಚ್ಚುತ್ತಿರುವ ವಸತಿ ಪ್ರದೇಶ ಹಾಗೂ ಅವುಗಳತ್ತ ಬರುವ ಕಾರಣಕ್ಕೆ ಹತ್ಯೆಗೀಡಾಗುತ್ತಿರುವುದು ಅವುಗಳ ಸಂಖ್ಯೆಯಲ್ಲಿನ ಕುಸಿತಕ್ಕೆ ಮುಖ್ಯ ಕಾರಣ. ದುರಂತವೆಂದರೆ ‘ಹುಲಿ ರಾಜ್ಯ’ ಎಂದು ಕರೆಯಲ್ಪಡುವ ಮಧ್ಯಪ್ರದೇಶದಲ್ಲೇ ದೇಶದ ಅತಿ ಹೆಚ್ಚು ಹುಲಿಗಳು ಸಾವು ದಾಖಲಾ ಗಿದೆ.
ಹುಲಿಯನ್ನು ರಾಷ್ಟ್ರಪ್ರಾಣಿಯಾಗಿಸಿಕೊಂಡಿರುವ ಭಾರತವೇ ಹುಲಿ ಸಾವಿನ ಜಾಗತಿಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ)ದ ಅಂಕಿ ಅಂಶದ ಪ್ರಕಾರ, ಈ ವರ್ಷವೊಂದರಲ್ಲೇ ಇದುವರೆಗೆ 75 ಹುಲಿಗಳು ಸಾವನ್ನಪ್ಪಿವೆ. ಕಳೆದ ವರ್ಷ 127 ಹುಲಿಗಳು ಸಾವನ್ನಪ್ಪಿವೆ, ಇದು 2012-2022 ಅವಧಿಯಲ್ಲಿ ಅತಿ ಹೆಚ್ಚು ಹುಲಿಗಳನ್ನು ಭಾರತ ಕಳೆದುಕೊಂಡಿದೆ.
ಮಧ್ಯಪ್ರದೇಶದ ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (183), ಕರ್ನಾಟಕ (150)ಗಳಿರುವುದು ಇನ್ನೂ ಆತಂಕಕಾರಿ ಸಂಗತಿ. ಇನ್ನಷ್ಟು ದುರದೃಷ್ಟಕರ ಮಾಹಿತಿಯೆಂದರೆ ದಶಕದ ಅವಧಿಯಲ್ಲಿ ದೇಶದಲ್ಲಿ 193 ಹುಲಿಗಳು ಬೇಟೆಗೆ ಬಲಿಯಾಗಿರು ವುದು. ಬ್ರಿಟಿಷರ ವಿಲಾಸದ ಇಂಥ ಮನಸ್ಥಿತಿ ಇಂದಿಗೂ ದೇಶದಲ್ಲಿ ಜೀವಂತವಿರುವುದು, ಅದಕ್ಕೆ ಅಳಿವಿನಂಚಿನಲ್ಲಿರುವ ಜೀವ ಸಂತಿಗಳೇ ಬಲಿಯಾಗುತ್ತಿರುವುದು ದುರದೃಷ್ಟಕರ. ಇಂಥದ್ದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ, ಮಾತ್ರವಲ್ಲ ಈ ನಿಟ್ಟಿನಲ್ಲಿ ಸೂಕ್ತ ನೀತಿ ನಿರೂಪಣೆಯೂ ಜಾರಿಗೊಳ್ಳಬೇಕಿದೆ.