ಮಸೀದಿಗಳಲ್ಲಿ ಸ್ಪೀಕರ್ ಹಾಕಿ ಆಜಾನ್ ಕೂಗದಂತೆ ಸುಪ್ರೀಂಕೋರ್ಟ್ ಆದೇಶವಿದ್ದರೂ ನಿತ್ಯವೂ ಆಜಾನ್ ಕೂಗುವ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತಿದೆ. ಸರಕಾರವೂ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದಕ್ಕೆ ಹಿಂದುಪರ ಸಂಘಟನೆಗಳು ರಾಜ್ಯದಲ್ಲಿ ಸೋಮವಾರದಿಂದ ದೇವಸ್ಥಾನಗಳಲ್ಲಿ ಘಂಟಾನಾದ ಮೊಳಗಿಸಲು ಶುರು ಮಾಡಿವೆ.
ಶಬ್ದಮಾಲಿನ್ಯವು ಒಂದು ಗಂಭೀರ ಸಮಸ್ಯೆಯಾಗಿದೆ. ಅಲ್ಲದೆ ಜನರ ಮಾನಸಿಕ ಆರೋಗ್ಯಕ್ಕೆ ಬೆದರಿಕೆಯಾಗಿದೆ. ಶಬ್ದವು ಆರೋಗ್ಯಕ್ಕೆ ಮಾರಕವಾಗಿರುವಂತಿದ್ದರೆ ಯಾವುದೇ ರೂಪದಲ್ಲಿರಲಿ, ಯಾರೇ ಉಂಟು ಮಾಡಲಿ ಅದನ್ನು ನಿಲ್ಲಿಸಲು ಕಾನೂನು ಕ್ರಮ ತೆಗೆದುಕೊಳ್ಳಲಿ. ಬೆಳ್ಳಂಬೆಳಗ್ಗೆಯೇ ವಿಪರೀತ ಶಬ್ದ ಕೇಳಿಕೊಂಡು ನಿದ್ರೆಯಿಂದ ಎಚ್ಚರವಾಗುವುದು ಆರೋಗ್ಯಕ್ಕೆ ಹಾನಿಕರ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ವೃದ್ಧರ ಆರೋಗ್ಯಕ್ಕೆ ಇನ್ನಷ್ಟು ತೊಂದರೆ ಉಂಟುಮಾಡುತ್ತದೆ. ಅಲ್ಲದೆ ಚಿಕ್ಕ ಮಕ್ಕಳ ಮೆದುಳಿನ ಬೆಳವಣಿಗೆಯ ಮೇಲೆ ಈ ರೀತಿಯ ಶಬ್ದ ತುಂಬಾ ಗಂಭೀರ ಪರಿಣಾಮ ಬೀರುತ್ತದೆ ಎಂಬುದೂ ವೈಜ್ಞಾನಿಕವಾಗಿ ಸಾಬೀತಾಗಿರುವ ವಿಚಾರ.
ಬೆಳಗ್ಗೆ ಐದು ಅಥವಾ ಆರು ಗಂಟೆಗೆ ಮತ್ತು ರಾತ್ರಿ ಜನರು ಮಲಗುವ ಹೊತ್ತಿನಲ್ಲಿ ಮೈಕು ಹಾಕಿಕೊಂಡು ನಿಶ್ಶಬ್ದದ ವಾತಾವರಣ ಹಾಳುಮಾಡುವ ಕೆಲಸವನ್ನು ಯಾರೇ ಮಾಡಿದರೂ ಅದು ಅಕ್ಷಮ್ಯ ಮತ್ತು ಶಿಕ್ಷಾರ್ಹ. ಅದನ್ನು ಬಿಟ್ಟು ‘ನೀವು ಮಾಡಿದರೆ ನಾವೂ ಮಾಡುತ್ತೇವೆ’ ಎಂದರೆ, ಅದು ಕಾನೂನು ಮತ್ತು ಸಂವಿಧಾನಕ್ಕೆ ತೋರುವ ಅಗೌರವವೇ ವಿನಾ ಮತ್ತೇನೂ ಅಲ್ಲ. ಆದ್ದರಿಂದ ಸರಕಾರ ಶಬ್ದಮಾಲಿನ್ಯ ಉಂಟುಮಾಡುವ ಯಾವುದೇ ರೀತಿಯ ಚಟುವಟಿಕೆಗಳನ್ನು ಕಾನೂನು ಚೌಕಟ್ಟಿನಲ್ಲಿ ನಿವಾರಿಸಲು ತಕ್ಷಣ ಕ್ರಮ ಕೈಗೊಂಡು ಜನರ ಮಾನಸಿಕ ಆರೋಗ್ಯ ಕಾಪಾಡ ಬೇಕು.
ಧ್ವನಿವರ್ಧಕಗಳಲ್ಲಿ ಶಬ್ದ ಎಷ್ಟಿರಬೇಕು ಎಂಬುದರ ಬಗ್ಗೆ ಪರೀಶಿಲಿಸಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಸರಕಾರ ನಿರ್ಧಾರ ತೆಗೆದುಕೊಳ್ಳುವವರೆಗೂ ಬೇರೆಯವರು ಸರಕಾರದ ಕೆಲಸ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬಾರದು. ಧ್ವನಿವರ್ಧಕ
ಬಳಕೆ ನಿರ್ಬಂಧಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ದೇವಸ್ಥಾನ, ಮಸೀದಿ ಎಲ್ಲವಕ್ಕೂ ಅನ್ವಯವಾಗುತ್ತದೆ. ಯಾರೇ ತಪ್ಪು ಮಾಡಿದರೂ ಸರಕಾರ ಅವರ ಮೇಲೆ ಕ್ರಮ ಜರುಗಿಸಬೇಕು.