Friday, 13th December 2024

ದೀರ್ಘಾಯಸ್ಸು ಶಾಪವಾಗದಿರಲಿ

೨೦೪೬ರ ವೇಳೆಗೆ ಭಾರತದಲ್ಲಿ ೧೫ ವರ್ಷದವರೆಗಿನ ಮಕ್ಕಳ ಸಂಖ್ಯೆಗಿಂತ ವಯಸ್ಸಾದವರ ಸಂಖ್ಯೆ ಹೆಚ್ಚಾಗಿರುತ್ತದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ಹೇಳಿದೆ. ೨೦೨೨ ಮತ್ತು ೨೦೫೦ ನಡುವೆ ೮೦ ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರ ಸಂಖ್ಯೆಯು ಶೇ.೨೭೯ ರಷ್ಟು ಹೆಚ್ಚಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆರೋಗ್ಯ ಸೇವೆಗಳ ಹೆಚ್ಚಳದಿಂದಾಗಿ ಮರಣಗಳ ಅನುಪಾತ ಕಡಿಮೆಯಾಗಿದೆ.

ಹೀಗಾಗಿ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಂತೋಷದ ಸಂಗತಿಯೇ. ಆದರೆ ವೃದ್ಧರ ಬದುಕು ಸಮಾಧಾನಕರವಾಗಿದೆಯೇ? ಅವರು ಸಂತೋಷವಾಗಿದ್ದಾರೆಯೇ ಎಂಬ ಪ್ರಶ್ನೆಗೆ ‘ಇಲ್ಲ’ ಎಂಬ ಉತ್ತರ ಬರುತ್ತದೆ. ಭಾರತದ ಶೇ.೪೦ರಷ್ಟು ವೃದ್ಧರು ಬಡತನದಲ್ಲಿ ಬದುಕುತ್ತಿದ್ದಾರೆ.  ಶೇ.೧೮.೭ ರಷ್ಟು ಜನರು ಯಾವುದೇ ಆದಾಯವಿಲ್ಲದೆ ಬದುಕುತ್ತಿದ್ದಾರೆ. ಹೀಗಾಗಿ ವೃದ್ಧರ ಪರಿಸ್ಥಿತಿ ಆರ್ಥಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕ ವಾಗಿಯೂ ಉತ್ತಮ ಸ್ಥಿತಿಯಲ್ಲಿಲ್ಲ. ಇಂದು ನಗರಗಳಲ್ಲಿ ಪ್ರತಿ ೧೦ ಮಂದಿ ವೃದ್ಧ ದಂಪತಿಗಳಿದ್ದರೆ ಅವರಲ್ಲಿ ೬ ದಂಪತಿ ಮಕ್ಕಳಿಂದ ಬಲವಂತವಾಗಿ ಹೊರಕಳಿಸ ಲ್ಪಟ್ಟೋ ತಾವೇ ಬಯಸಿಯೋ ದೂರವಾಗಿದ್ದಾರೆ.

ಇವರಲ್ಲಿ ವೃದ್ಧಾಶ್ರಮಕ್ಕೆ ಹೋಗಬಲ್ಲ ಆರ್ಥಿಕ ಬಲವುಳ್ಳವರು ಕೆಲವೇ ಮಂದಿ. ಉಳಿದವರು ಇತರರ ಹಂಗಿನಲ್ಲಿ ಹೇಗೋ ದಿನ ದೂಡಬೇಕಾಗಿದೆ. ಮಕ್ಕಳಿಂದ ಪೋಷಕರಿಗೆ ಕಿರುಕುಳ, ಬಂಧಿಸಿಟ್ಟು ಚಿತ್ರಹಿಂಸೆ ನೀಡುವುದು, ಬಲವಂತವಾಗಿ ಅವರ ಆಸ್ತಿಯನ್ನು ಪಡೆದುಕೊಳ್ಳುವುದು ಮುಂತಾದ ಪ್ರಕರಣಗಳು ಹೆಚ್ಚಾಗುತ್ತಿವೆ. ಅನೇಕರು ಮನೆಯ ಗೌರವಕ್ಕೆ ಧಕ್ಕೆಯುಂಟಾಗುತ್ತದೆ ಎಂಬ ಕಾರಣಕ್ಕೆ ಸುಮ್ಮನಿರುತ್ತಾರೆ.

ತಂದೆತಾಯಿಗಳೇ ದೇವರೆಂದು ಭಾವಿಸಿಕೊಂಡು ಬಂದಂತಹ ಭಾರತೀಯ ಸಂಸ್ಕೃತಿಯಲ್ಲಿ ಇಂಥ ಪಲ್ಲಟ ಯಾಕೆ ತಲೆದೋರಿತು? ಮಕ್ಕಳ ವಿದ್ಯಾಭ್ಯಾಸದಿಂದ, ಉದ್ಯೋಗ ದೊರೆಯುವರೆಗೂ, ಸಂಪೂರ್ಣ ಬೆಳವಣಿಗೆಯ ಜವಾಬ್ದಾರಿಯನ್ನು ಹೊರುವ ಪೋಷಕರು ವಯಸ್ಸಾದೊಡನೆ ತಮ್ಮ ಮಕ್ಕಳಿಂದ ತಿರಸ್ಕಾರಕ್ಕೆ ಒಳಗಾಗುವುದೇಕೆ? ಇದಕ್ಕೆ ಯುವಜನತೆಯ ಮನೋಭೂಮಿಕೆಯಲ್ಲಿ ಆಗಿರುವ ಸ್ವಾರ್ಥಮಯ ಪಲ್ಲಟ, ಆಧುನಿಕ ಜೀವನಶೈಲಿಗಳೇ ಕಾರಣ ಎನ್ನಬಹುದು. ವೃದ್ಧರು ತಮ್ಮ ಕೊನೆಯ ದಿನಗಳನ್ನು ಮಕ್ಕಳೊಂದಿಗೆ ಕಳೆಯಲು ಇಷ್ಟ ಪಡುತ್ತಾರೆ. ತಮ್ಮ ಅನಿಸಿಕೆ ಹಂಚಿಕೊಳ್ಳಲು ಬಯಸು ತ್ತಾರೆ.

ಮಕ್ಕಳ ಯಶಸ್ಸಿಗೆ ಆಸರೆಯಾಗಲು ಬಯಸುತ್ತಾರೆ ಹೊರತು ಮಕ್ಕಳಿಗೆ ಭಾರವಾಗಿರಲು ಎಂದೂ ಇಷ್ಟಪಡುವುದಿಲ್ಲ ಎಂಬುದನ್ನು ಇಂದಿನ ಯುವಕರು
ಅರ್ಥ ಮಾಡಿಕೊಳ್ಳಬೇಕು. ದೀರ್ಘಾಯಸ್ಸು ಒಂದು ಶಾಪವಲ್ಲ, ವರ ಎಂದು ಭಾವಿಸುವಂತಾಗಬೇಕು.