Friday, 13th December 2024

ಪೊಲೀಸರ ಮೇಲಿನ ಒತ್ತಡ ಕಡಿಮೆಯಾಗಲಿ

ರಜೆ ನೀಡದ ಕಾರಣಕ್ಕಾಗಿ ತೋರಣಗಲ್ಲು ಡಿವೈಎಸ್‌ಪಿ ಎಸ್.ಎಸ್.ಕಾಶಿಗೌಡ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ವಿರುದ್ಧ ಕಿಡಿಕಾರಿ ಬರೆದಿರುವ ಪತ್ರವೊಂದು ಸಾಮಾ ಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಜೆ ಕಾರಣಕ್ಕಾಗಿ ಪಲೀಸ್ ಇಲಾಖೆಯಲ್ಲಿರುವ ಕೆಳ ದರ್ಜೆಯ ಅಧಿಕಾರಿಗಳು ಮೇಲಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕುವುದು ಇದೇ ಮೊದಲಲ್ಲ.

ಈ ಹಿಂದೆಯೂ ದಾವಣಗೆರೆಯ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಕಾನ್ಸ್‌ಟೆಬಲ್ ಹನಮಂತಪ್ಪ ನಿಲಗುಂದ ಎಂಬುವವರು ‘ಮದುವೆ ಮಾಡಿಕೊಳ್ಳುವುದಕ್ಕೆ ಹುಡುಗಿ ನೋಡಲು ಸಹ ರಜೆ ಸಿಗುತ್ತಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಪತ್ರ ಸದ್ದು ಮಾಡಿತ್ತು.

ಇಂತಹ ಹಲವಾರು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ೨೦೨೧ ಜನವರಿ ೨೮ರಂದು ಅಂದಿನ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವಿಣ್ ಸೂದ್ ಅವರು ‘ರಾಜ್ಯ ಪೊಲೀಸ್ ಸಿಬ್ಬಂದಿಗೆ ವಾರದಲ್ಲಿ ಒಂದು ದಿನ ಕಡ್ಡಾಯ ರಜೆ ನೀಡಬೇಕು. ತಪ್ಪಿದರೆ, ಸೂಕ್ತ ಕ್ರಮ ಕೈಗೊಳ್ಳಬೇಕಾಗು ತ್ತದೆ’ ಎಂದು ಸುತ್ತೊಲೆ ಹೊರಡಿಸಿ ರಾಜ್ಯದ ಪೊಲೀಸ್ ಕಮಿಷನರ್‌ಗಳು, ಐಜಿಪಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರವಾನಿಸಿದ್ದರು. ಆದರೆ, ಈವರೆಗೂ ಆ ಆದೇಶ ಜಾರಿಗೆ ಬಂದಿಲ್ಲ.

ಇದಕ್ಕೆ ಮುಖ್ಯ ಕಾರಣ ಸಿಬ್ಬಂದಿ ಕೊರತೆ. ರಾಜ್ಯದಲ್ಲಿ ನಡೆಯುವ ಅಪರಾಧ ಪ್ರಕರಣಗಳು, ಟ್ರಾಫಿಕ್ ಒತ್ತಡಕ್ಕೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ
ಇಲ್ಲದಿರುವುದಕ್ಕೇ ಈಗ ಇರುವ ಪೊಲೀಸರ ಮೇಲೆ ಒತ್ತಡ ಬೀಳುತ್ತಿದೆ. ಈ ನಡುವೆಯೂ ಆಶಾದಾಯಕ ಬೆಳವಣಿಗೆಯೆಂದರೆ, ೨೦೨೩-೨೪ನೇ ಸಾಲಿನಲ್ಲಿ ೧,೨೨೬ ಹುದ್ದೆ, ೨೦೨೪-೨೫ನೇ ಸಾಲಿನಲ್ಲಿ ೧,೨೨೮ ಹುz ಸೇರಿದಂತೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು ೨೪೫೪ ಹುzಗಳನ್ನು ೨ ಹಂತದಲ್ಲಿ ಹೊಸದಾಗಿ ಸೃಜಿಸಿ ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆಯು ಅನುಮತಿ ನೀಡಿದೆ.

ರಾಜ್ಯದಲ್ಲಿ ಹೊಸ ಸರಕಾರ ರಚನೆ ಆಗಿದೆ. ಡಾ.ಜಿ.ಪರಮೇಶ್ವರ ಅವರಂತಹ ಅನುಭವಿಗಳು ಗೃಹ ಇಲಾಖೆಯ ಹೊಣೆ ಹೊತ್ತುಕೊಂಡಿದ್ದಾರೆ. ಆದಷ್ಟು ಬೇಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಈಗ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಮೇಲಿನ ಒತ್ತಡ ಕಡಿಮೆ ಮಾಡಲಿ. ಆ ಮೂಲಕ ನಿರುದ್ಯೋಗಿಗಳಿಗೆ ಹೊಸ ಉದ್ಯೋಗಗಳನ್ನೂ ನೀಡಲಿ.