Monday, 9th December 2024

ಖಾಸಗಿ ಶಾಲೆಗಳಿಗೆ ಕಾಳಜಿ ಮರೆಯಾಗದಿರಲಿ

ಪ್ರಸಕ್ತ ಶೈಕ್ಷಣಿಕ ವರ್ಷ ಬಾರಿ ಇಕ್ಕಟ್ಟಿನ ಸ್ಥಿತಿಗೆ ತಲುಪಿದೆ. ಪೋಷಕರು, ಶಿಕ್ಷಕರು, ಆಡಳಿತಮಂಡಳಿಗಳ ಸಮಸ್ಯೆಗಳು ಭಿನ್ನ ರೀತಿಯದ್ದಾಗಿದ್ದು, ಇವುಗಳ ನಿವಾರಣೆ ಸರಕಾರಕ್ಕೂ ಕಗ್ಗಂಟಾಗಿ ಪರಿಣಮಿಸಿದೆ.

ಶುಲ್ಕ ಪಾವತಿ ವಿಚಾರದಲ್ಲಿ ಪೋಷಕರು ಹಾಗೂ ಶಾಲೆಯ ಆಡಳಿತ ಮಂಡಳಿಗಳ ನಡುವೆ ಭಿನ್ನಾಭಿಪ್ರಾಯಗಳು ಏರ್ಪಡುತ್ತಿವೆ. ಲಾಕ್‌ಡೌನ್‌ನಿಂದಾಗಿ ಪ್ರತಿಯೊಬ್ಬರಿಗೂ ಆರ್ಥಿಕ ಸಂಕಷ್ಟ ಸ್ಥಿತಿ ಎದುರಾಗಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಖಾಸಗಿ ಶಾಲೆಗಳು ಮೊದಲಿನಂತೆಯೇ ಪೂರ್ಣಪ್ರಮಾಣದ ಶುಲ್ಕ ಪಾವತಿಗೆ ಸೂಚಿಸುತ್ತಿವೆ. ಆದರೆ ಪೂರ್ಣ ಪ್ರಮಾಣದ ಶುಲ್ಕ ಪಾವತಿ
ಪೋಷಕರಿಗೆ ಹೊರೆಯಾಗಲಿದೆ. ಆದ್ದರಿಂದ ಈ ಸಮಸ್ಯೆ ನಿವಾರಣೆಗೆ ಸರಕಾರವೇ ತೀರ್ಮಾನ ಪ್ರಕಟಿಸಬೇಕೆಂಬುದು ಬಹುತೇಕ ಪೋಷಕರ ಆಗ್ರಹ. ಖಾಸಗಿ ಶಾಲೆಗಳದ್ದು ಮತ್ತೊಂದು ರೀತಿಯ ಅಳಲು. ಭೌತಿಕ ತರಗತಿ ನಡೆಸುತ್ತಿದ್ದ ಸಂದರ್ಭದಲ್ಲಿ ಉಂಟಾಗುತ್ತಿದಕ್ಕಿಂತ ಆನ್‌ಲೈನ್ ತರಗತಿ ನಡೆಸಲು ಖರ್ಚು ಹೆಚ್ಚಾಗುತ್ತದೆ.

ಆದ್ದರಿಂದ ಪೂರ್ಣಪ್ರಮಾಣದ ಶುಲ್ಕ ಪಾವತಿಸಲೇಬೇಕು ಎಂಬುದು ಖಾಸಗಿ ಶಿಕ್ಷಣ ವ್ಯವಸ್ಥೆಯ ಅಭಿಪ್ರಾಯ. ಈ ಸಮಸ್ಯೆ
ನಿವಾರಣೆಗೆ ಸರಕಾರ ಮುಂದಾಗುವಂತೆ ಪ್ರತಿಪಕ್ಷದ ನಾಯಕರಿಂದಲೂ ಆಗ್ರಹ ವ್ಯಕ್ತವಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರಬರೆದು ಪೋಷಕರು ಪಾವತಿಸಬೇಕಿರುವ ರಿಯಾಯಿತಿ ಶುಲ್ಕವನ್ನು ಪ್ರಕಟಿಸಬೇಕು ಹಾಗೂ ಸರಕಾರದ ನಿರ್ಧಾರ ಕಟ್ಟುನಿಟ್ಟಿನಿಂದ ಪಾಲಿಸುವಂತೆ ಕ್ರಮವಹಿಸುವಂತೆ ಕೋರಿದ್ದಾರೆ. ಆದರೆ ಪ್ರತಿಯೊಂದನ್ನು ಸರಕಾರದ ಸೂಚನೆ ಹಾಗೂ ಕ್ರಮಗಳಿಂದಲೇ ನಿರ್ಧರಿಸುವುದಕ್ಕಿಂತಲೂ ಮಾನವೀಯತೆ ಮುಖ್ಯವಾಗುತ್ತದೆ.

ಪ್ರಸ್ತುತ ಪರಿಸ್ಥಿತಿಯನ್ನು ಅರಿತಿರುವ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮಕ್ಕಳ ವಿದ್ಯಾಭ್ಯಾಸದ ಕಾಳಜಿ ನಿಟ್ಟಿನಲ್ಲಿ ಮಾನವೀಯತೆ ಆಧಾರದಲ್ಲಿ ಶುಲ್ಕವನ್ನು ನಿರ್ಧರಿಸುವುದು ಮುಖ್ಯ.