ತೆರಿಗೆ ಹಂಚಿಕೆ ವಿಷಯದಲ್ಲಿ ಕೇಂದ್ರ ಸರಕಾರದಿಂದ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ, ಬರ ಪರಿಹಾರ ನೀಡುವಿಕೆಯಲ್ಲೂ ವಿಳಂಬವಾಗಿದೆ ಎಂಬ ಆರೋಪ ದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು, ಸಚಿವ ಸಂಪುಟದ ಸದಸ್ಯರು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ ದೇಶವೇ ಸಾಕ್ಷಿಯಾಗಿದೆ. ಕರ್ನಾಟಕದ ವಿಷಯದಲ್ಲಿ ತಾರತಮ್ಯ ಧೋರಣೆ ಮೆರೆಯುತ್ತಿರುವ ಕೇಂದ್ರ ಸರಕಾರವು, ಕಳೆದ ೫ ವರ್ಷಗಳಲ್ಲಿ ರಾಜ್ಯಕ್ಕೆ ಆಗಿರುವ ೧.೮೭ ಲಕ್ಷ ಕೋಟಿ ರುಪಾಯಿಯಷ್ಟು ನಷ್ಟಕ್ಕೆ ಪರಿಹಾರ ಕಟ್ಟಿಕೊಡಬೇಕು ಎಂದು ಸಿದ್ದರಾಮಯ್ಯ ಅವರು ಇದೇ ವೇಳೆ ಆಗ್ರಹಿಸಿರುವುದು ಗಮನಾರ್ಹ.
ಈ ಬೆಳವಣಿಗೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಪ್ರತ್ಯೇಕತಾವಾದಿ ಮನಸ್ಥಿತಿ ಹೊಂದಿರುವ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರವು ಅನುದಾನ ಹಂಚಿಕೆಯ ವಿಷಯದಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸುವ ಮೂಲಕ ಸುಳ್ಳು ನಿರೂಪಣೆಗೆ ಮುಂದಾಗಿದೆ. ವಿಧಾನಸಭಾ ಚುನಾವಣೆಯ ವೇಳೆ ತಾವು ಘೋಷಿಸಿದ್ದ ‘ಗ್ಯಾರಂಟಿ’ ಯೋಜನೆಗಳನ್ನು ನೆರವೇರಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿರುವ
ಕರ್ನಾಟಕ ಕಾಂಗ್ರೆಸ್ ನಾಯಕರು, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಹಾಗೂ ಗಮನವನ್ನು ಬೇರೆಡೆಗೆ ಸೆಳೆಯಲು ಹೀಗೆ ಸುಳ್ಳು ನಿರೂಪಣೆಯ ಮೊರೆಹೋಗಿದ್ದಾರೆ’ ಎಂದು ವಾಗ್ಬಾಣ ಬಿಟ್ಟಿದ್ದಾರೆ.
‘ಕರ್ನಾಟಕಕ್ಕೆ ಸಲ್ಲಬೇಕಿರುವ ತೆರಿಗೆ ಪಾಲು ನೀಡಲಾಗದಿದ್ದರೆ ಪ್ರತ್ಯೇಕ ರಾಷ್ಟ್ರ ಕೊಡಿ’ ಎಂಬ ಆಗ್ರಹ ಕಾಂಗ್ರೆಸ್ ಸಂಸದರೊಬ್ಬರಿಂದ ಹೊಮ್ಮಿದ್ದೂ ನಿರ್ಮಲಾ ಅವರ ಟೀಕೆಗೆ ಗ್ರಾಸವೊದಗಿಸಿದೆ ಎನ್ನಬೇಕು. ರಾಜಕೀಯ ಎದುರಾಳಿಗಳು ಎಂದ ಮೇಲೆ ಟೀಕೆ-ಪ್ರತಿಟೀಕೆ ಸಾಮಾನ್ಯ. ಆದರೆ ‘ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು’ ಎಂಬ ಮಾತಿನಂತೆ, ಪ್ರಜೆಗಳು ಇದರ ವ್ಯತಿರಿಕ್ತ ಪರಿಣಾಮವನ್ನು ಅನುಭವಿಸುವಂತಾಗಬಾರದು. ಹೇಳಿ ಕೇಳಿ ನಮ್ಮದು ಒಕ್ಕೂಟದ ಸ್ವರೂಪವಿರುವ ಆಳುಗ ವ್ಯವಸ್ಥೆ. ಹೀಗಾಗಿ ಅನುದಾನ ಹಂಚಿಕೆಯಲ್ಲಿ ಯಾರಿಗೂ ತಾರತಮ್ಯವಾಗದಂತೆ ನೋಡಿಕೊಳ್ಳಬೇಕಾದ್ದು ಸಂಬಂಧಪಟ್ಟವರ ಹೆಗಲ ಮೇಲಿನ ಹೊಣೆ. ಹೊಂದಿಕೊಂಡು ಹೋಗುವುದರಲ್ಲೇ ಬದುಕಿನ ಸುಖವಿದೆ ಎಂಬುದನ್ನು ಮರೆಯಲಾಗದು.