Friday, 20th September 2024

ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡದಿರಿ

ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಮಂಗಳವಾರ
ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೆ ಇದೆ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಬಸ್, ಕಾರು ಸೇರಿದಂತೆ ವಾಹನಗಳ ಮೇಲೆ ಕಲ್ಲು ತೂರಾಟ ಮಾಡುವುದು, ಬೆಂಕಿ ಹಚ್ಚುವುದು ಮುಂತಾದ ವಿಧ್ವಂಸಕ ಕೃತ್ಯಗಳಿಂದ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವುದನ್ನು ಈ ಹಿಂದೆ ಕಂಡಿದ್ದೇವೆ.

ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಅದನ್ನು ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ. ಯಾರೋ ಒಬ್ಬರು ಮಾಡುವ ತಪ್ಪಿನಿಂದ ಎಲ್ಲರಿಗೂ ಹೊರೆ ಎಂಬ ಕನಿಷ್ಠ ಜ್ಞಾನ ಇರಬೇಕು. ಯಾಕೆಂದರೆ ನಾವು ಸರಕಾರದ ಆಸ್ತಿ ಪಾಸ್ತಿಗಳನ್ನು ಹಾನಿಗೊಳಿಸಿದರೆ ಆನಂತರ ಅದನ್ನು ಸರಿಪಡಿಸಲು ಸರಕಾರವು ನಮ್ಮ ಮೇಲೆಯೇ ತೆರಿಗೆಗಳನ್ನು ವಿಽಸುತ್ತದೆ ಎಂಬ ಅರಿವು ಇರಬೇಕು.

ನಮ್ಮ ಕೋಪಕ್ಕೆ ನಮ್ಮ ಮೂಗನ್ನು ನಾವೇ ಕುಯ್ದುಕೊಂಡರೆ ನಾಳೆಯ ದಿನ ನಾವೇ ನಮ್ಮ ಮುಖ ನೋಡಿಕೊಳ್ಳಲು ಹೆದರುವಂತಾಗುತ್ತದೆ. ಆದ್ದರಿಂದ ಯಾರೂ ತಮ್ಮ ಕೋಪವನ್ನು ಕೈಗೆ ಕೊಟ್ಟು ದರ್ಪ ತೋರುವುದು ಸರಿಯಲ್ಲ. ಸರಕಾರ, ಸಮಾಜ ಹಾಗೂ ಮಾಧ್ಯಮಗಳ ಗಮನವನ್ನು ತಮ್ಮ ಬೇಡಿಕೆಯತ್ತ ಕೂಡಲೇ ಸೆಳೆಯಲು ಅನೇಕ ದಾರಿಗಳಿವೆ. ಅದೆಲ್ಲವನ್ನೂ ಬಿಟ್ಟು ಸಾರ್ವಜನಿಕ ಆಸ್ತಿ ನಾಶದಂತಹ ಅಡ್ಡ ಹಾದಿ ಹಿಡಿಯುವುದು ಸರಿಯಲ್ಲ. ಪ್ರತಿಭಟನೆಗೆ ಏನೇ ಕಾರಣವಿದ್ದರೂ ಅದು ಶಾಂತಿಯುತವಾಗಿದ್ದ ಪಕ್ಷದಲ್ಲಿ ಮಾತ್ರ ಅದಕ್ಕೆ ಬೆಲೆ ಇರುತ್ತದೆ.

ಸರಕಾರ ಕೂಡ ಅಂತಹ ಕಿಡಿಗೇಡಿಗಳಿಗೆ ಯಾವುದೇ ಕಾರಣಕ್ಕೂ ಬಗ್ಗದೆ ಸೂಕ್ತ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಬೇಕು.
ಸಾರ್ವಜನಿಕ ಆಸ್ತಿ ನಾಶವಾದಲ್ಲಿ ನಾಶ ಮಾಡಿದವರಿಂದಲೇ ಬಡ್ಡಿ ಸಮೇತ ನಷ್ಟ ಭರಿಸಬೇಕು. ಅಸಾಧ್ಯವಾದಲ್ಲಿ ಕಠಿಣ ಕ್ರಮ ಕೈಗೊಂಡು ಕಂಬಿ ಎಣಿಸುವಂತೆ ಮಾಡಬೇಕು. ಆಗ ಮಾತ್ರ ಅಂತಹ ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯ ವಾಗುತ್ತದೆ.