Saturday, 14th December 2024

ಆತ್ಮಾವಲೋಕನದ ಪರ್ವಕಾಲ

ಮತ್ತೊಂದು ಕನ್ನಡ ರಾಜ್ಯೋತ್ಸವ ಬಂದಿದೆ. ರಾಜ್ಯೋತ್ಸವ ಎಂದಾಕ್ಷಣ ಅಪ್ರಯತ್ನವಾಗಿ ಪುಳಕಗೊಳ್ಳುವ ಕನ್ನಡದ ಸಹೃದಯಿಗಳ ಸಂತಸಕ್ಕೆ ಈ ಬಾರಿ ಮತ್ತೊಂದು ಆಯಾಮವೂ ಸಿಕ್ಕಿದೆ. ಅದು, ಒಂದು ಕಾಲಕ್ಕೆ ‘ಮೈಸೂರು’ ಎಂದು ಕರೆಸಿಕೊಳ್ಳುತ್ತಿದ್ದ ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣವಾಗಿ ೫೦ ವರ್ಷವಾಗಿರುವುದರ ಹೆಚ್ಚುವರಿ ಸಂಭ್ರಮದ ಕುರಿತಾದದ್ದು.

ಹೀಗಾಗಿ ಪ್ರತಿಯೊಬ್ಬ ಕನ್ನಡಿಗರ ಮನದಲ್ಲೂ ಹಿಗ್ಗಿನ ಬುಗ್ಗೆ ನಿರಂತರವಾಗಿದೆ. ಚಿತ್ರಕಲೆ, ಶಿಲ್ಪಕಲೆ, ಪ್ರದರ್ಶನ ಕಲೆ, ಸಾಹಿತ್ಯ, ಸಂಸ್ಕೃತಿ, ಮಾಹಿತಿ
ತಂತ್ರಜ್ಞಾನ ಹೀಗೆ ವಿವಿಧ ಕ್ಷೇತ್ರಗಳಿಗೆ ಅನುಪಮ ಕೊಡುಗೆ ನೀಡಿದ ಧೀಮಂತರು ಹುಟ್ಟಿದ ಶ್ರೀಮಂತ ನಾಡಿದು. ಅವರ ಮಹೋನ್ನತ ಯೋಗದಾನ ಗಳನ್ನು ನೆನೆಯುತ್ತಲೇ ಸಮಷ್ಟಿಗೆ ಮತ್ತಷ್ಟು ಉತ್ತಮ ಕೊಡುಗೆಗಳನ್ನು ನೀಡಲು ಹಾಗೂ ಉತ್ತಮಿಕೆ ಮೆರೆಯಲು ಸಂಕಲ್ಪಿಸುವ ಸಂದರ್ಭವೂ ಹೌದು ಈ ರಾಜ್ಯೋತ್ಸವ. ಹಾಗೆಂದ ಮಾತ್ರಕ್ಕೆ ಕನ್ನಡಿಗರ ಮನಸ್ಸಿನಲ್ಲಿ ಕೊರಗುಗಳಿಲ್ಲ ಎಂದೇನಲ್ಲ.

ಆಡುಭಾಷೆಯಾಗಿರುವ ಕನ್ನಡವು ಅನ್ನದ ಭಾಷೆಯಾಗಬೇಕು, ಆಡಳಿತ ಭಾಷೆಯಾಗಬೇಕು ಎಂಬ ನಿರೀಕ್ಷೆ ನಿಜವಾಗದ ಕಾರಣ ಬಹುತೇಕರಲ್ಲಿ ಅಸಮಾಧಾನ ಮಡುಗಟ್ಟಿದೆ. ಕಾವೇರಿ ನದಿನೀರು ಹಂಚಿಕೆಗೆ ಸಂಬಂಽಸಿ ಮತ್ತೆ ಮತ್ತೆ ಅನ್ಯಾಯಕ್ಕೆ ಒಳಗಾಗುತ್ತಿದ್ದೇವಲ್ಲಾ ಎಂಬ ಹತಾಶೆಯೂ ಹರಿದಾಡುತ್ತಿದೆ. ದಶಕಗಳು ಕಳೆದರೂ ಈ ಸಮಸ್ಯೆಗಳಿಗೊಂದು ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಇದಕ್ಕೆ ಕಾರಣರಾದವರು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೂ ಈ ರಾಜ್ಯೋತ್ಸವ ಪರ್ವಕಾಲವಾಗಲಿ.

ಏಕೆಂದರೆ, ಕನ್ನಡ ಎಂದ ಮಾತ್ರಕ್ಕೆ ಕೇವಲ ಭಾಷೆಯ ಪರಿಽಗಷ್ಟೇ ಅದನ್ನು ಸೀಮಿತಗೊಳಿಸಲಾಗದು. ಕನ್ನಡಿಗರಿಗೆ ವಿಪುಲ ಉದ್ಯೋಗಾವ ಕಾಶಗಳು ಸಿಗುವಂತಾಗಬೇಕು, ವ್ಯಾಪಾರೋದ್ದಿಮೆಗಳಲ್ಲಿ ಕನ್ನಡಿಗರು ಪಾರಮ್ಯ ಸಾಧಿಸುವಂತಾಗಬೇಕು, ನೆಲ-ಜಲಗಳ ವಿಷಯದಲ್ಲಿ ಕರುನಾಡಿಗೆ ದಶಕಗಳಿಂದ ಆಗುತ್ತಿರುವ ಅನ್ಯಾಯಕ್ಕೆ ಇತಿಶ್ರೀ ಹಾಡುವಂತಾಗಬೇಕು ಎಂಬ ಸಹಜ ಆಶಯಗಳೂ ಕನ್ನಡದ ಭಾಗವೇ. ಇದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ; ಸಮಾಜದ ಒಂದೊಂದೂ ಕಾರ್ಯಕ್ಷೇತ್ರದ ಸಹಭಾಗಿಗಳು ಕೈಜೋಡಿಸಿ ಸಮಷ್ಟಿ ಪ್ರಜ್ಞೆ ಮೆರೆದಾಗ ಮಾತ್ರವೇ ಫಲಿಸುವ ತಪಸ್ಸಿದು. ಅದಕ್ಕಾಗಿ ಇವತ್ತೇ ಸಂಕಲ್ಪಿಸೋಣ, ಸಾಧಿಸಿ ತೋರಿಸೋಣ. ಸಿರಿಗನ್ನಡಂ ಗೆಲ್ಗೆ.