Wednesday, 11th December 2024

ವರ್ಷದ ಸಾಧನೆಗೆ ಸ್ಪಂದನೆ

Basavaraj Bommai

ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರದ ಚುಕ್ಕಾಣಿ ಹಿಡಿದ ಒಂದು ವರ್ಷ ಪೂರೈಸಿದ್ದಾರೆ. ಇದರ ಭಾಗವಾಗಿ ದೊಡ್ಡಬಳ್ಳಾಪುರ ದಲ್ಲಿ ಜನಸ್ಪಂದನ ಸಮಾವೇಶ ನಡೆಯುತ್ತಿದೆ. ಸರಕಾರ ತನ್ನ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇದು ಯಾವುದೇ ಸರಕಾರ ಮಾಡುವ ಸಾಮಾನ್ಯವಾದ ಕೆಲಸ. ತನ್ನ ಸಾಧನೆಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿ ಕೊಡುವ ಮೂಲಕ ತಾನು ಇಷ್ಟು ದಿನ ಸಾಧಿಸಿದ್ದೆಷ್ಟು ಎಂಬುದನ್ನು ಅವಲೋಕನ ಮಾಡಿಕೊಳ್ಳುವುದು ಒಂದು ಪ್ರಜಾಪ್ರಭುತ್ವ ಸರಕಾರದ ಆದ್ಯ ಕರ್ತವ್ಯ.

ಬೊಮ್ಮಾಯಿ ಅವರು ಕಳೆದ ಒಂದು ವರ್ಷದಲ್ಲಿ ಅಧಿಕಾರಕ್ಕೇರುವಾಗ ‘ಲಕ್ಕಿ ಸಿಎಂ’ ಎನಿಸಿಕೊಂಡಿದ್ದರೂ ಬರಬರುತ್ತ  ಕಾಮನ್ ಮ್ಯಾನ್- ಸಿಎಂ ಎಂದೇ ಜನಪ್ರಿಯರಾಗಿದ್ದು ಸಣ್ಣ ಮಾತಲ್ಲ. ಈ ಎರಡರ ನಡುವಿನ ಅಂತರದಲ್ಲಿ ಅನೇಕ ಸವಾಲುಗಳನ್ನು ಅವರು ಎದುರಿಸಿದರಾದರೂ, ಕೆಲವೊಂದು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ.

ದೇಶದಲ್ಲೇ ಮೊದಲ ಬಾರಿಗೆ ಎಸ್‌ಇಪಿ ಜಾರಿಗೆ ಮುಂದಾಗಿದ್ದು, ಮಳೆ ಹಾನಿಯಂತಹ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಲು ತೆಗೆದುಕೊಂಡ ಕ್ರಮಗಳು, ಯೋಜನೆ ಘೋಷಣೆ, ನಮ್ಮ ಕ್ಲಿನಿಕ್‌ಗಳ ಸ್ಥಾಪನೆ ನಿರ್ಧಾರದಂತಹ ಕೆಲವು ಅಂಶಗಳು ಅವರು ನಡೆಸುತ್ತಿರುವ ಆಡಳಿತ ವೈಖರಿಗೆ ಕನ್ನಡಿ ಎಂಬಂತೆ ಕಾಣಿಸಿಕೊಂಡಿವೆ. ಯಾವುದೇ ಮುಖ್ಯಮಂತ್ರಿಯಾಗಲೀ, ಅವರ ಸಂಪೂರ್ಣ ಸಾಮರ್ಥ್ಯವನ್ನು ಸಾಬೀತು ಮಾಡಲು ಸಾಕಷ್ಟು ಕಾಲಾವಕಾಶ ಬೇಕಾಗಿಯೇ ತೀರುತ್ತದೆ. ಆದರೆ, ಒಂದು ವರ್ಷದಲ್ಲಿ ಅಷ್ಟೇನೂ ಸಾಧನೆ ಎನ್ನಲಾಗದಿದ್ದರೂ, ಸಾಕಷ್ಟು ಪರವಾಗಿಲ್ಲ ಎಂಬಷ್ಟರ ಮಟ್ಟಿಗೆ ಸರಕಾರವನ್ನು ಸರಿಯಾದ ಹಳಿಯಲ್ಲಿ ಮುನ್ನಡೆಸಿ ದ್ದಾರೆ ಬೊಮ್ಮಾಯಿ ಅವರು.

ಇದೀಗ ಮುಂದಿನ ದಿನಗಳಲ್ಲಿ ಅವರ ಮುಂದೆ ಮತ್ತಷ್ಟು ಸವಾಲುಗಳಿದ್ದು, ಅದನ್ನು ನಿಭಾಯಿಸುವ ಚಾಕಚಕ್ಯತೆ ಮತ್ತು ಅನುಭವವನ್ನು ಅವರು ಪಡೆದುಕೊಂಡಿದ್ದಾರೆ. ಮುಂದೆ ಅವರಿಂದ ಸಮರ್ಥ ಆಡಳಿತದ ನಿರೀಕ್ಷೆಯನ್ನು ಮಾಡಬಹುದು ಎಂಬ ಭರವಸೆಯನ್ನು ಅವರು ಮೂಡಿಸಿದ್ದಾರೆ. ಅವರು ಆ ಭರವಸೆಯನ್ನು ಉಳಿಸಿಕೊಂಡು, ರಾಜ್ಯದ ಇತಿಹಾಸದಲ್ಲಿ ಉಳಿಯುವ ಕೆಲವೊಂದಿಷ್ಟು ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಸಿಎಂಗಳ ಪಟ್ಟಿಯಲ್ಲಿ, ಸಾಧನೆಯ ಪಟ್ಟಿಯಲ್ಲಿ ದಾಖಲಾಗಲಿ ಎಂಬುದು ಎಲ್ಲರ ಆಶಯ.