ದೇಶದಲ್ಲಿ ಎಲ್ಲ ಧರ್ಮೀಯರಿಗೂ ಅನ್ವಯ ಆಗುವಂತೆ ಜನಸಂಖ್ಯೆ ನಿಯಂತ್ರಣ ಆಗಬೇಕು ಎಂದು ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ನೀಡಿರುವ ಸಲಹೆ ದೇಶದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.
ಜನಸಂಖ್ಯೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದು ಕೇವಲ ಸಂಖ್ಯೆಗೆ ಸೀಮಿತವಾಗಿರದೇ ಸಂಪನ್ಮೂಲವಾಗಿ ಪರಿವರ್ತಿತವಾಗಬೇಕು. ಇಲ್ಲವಾದಲ್ಲಿ ಅತಿಯಾದ ಜನಸಂಖ್ಯೆ ಕೇವಲ ದೇಶ ಮಾತ್ರವಲ್ಲದೆ ಇಡೀ ವಿಶ್ವದ ಮೇಲೆ ಪರಿಣಾಮ ವನ್ನುಂಟು ಮಾಡುತ್ತದೆ.
ಸದ್ಯ ವಿಶ್ವದ ಬಹುತೇಕ ದೇಶಗಳು ಅದರಲ್ಲೂ ಭಾರತ ಸಹಿತ ಅಭಿವೃದ್ಧಿಶೀಲ ದೇಶ ಗಳನ್ನು ಕಾಡುತ್ತಿರುವುದು ಈ ಜನಸಂಖ್ಯೆ ಸಮಸ್ಯೆಯೇ. ಜನಸಂಖ್ಯಾ ಸ್ಫೋಟದಿಂದಲೇ ಭಾರತವು ಜಾಗತಿಕ ಹಸಿವು ಸೂಚ್ಯಂಕದಲ್ಲಿ ೧೦೩ನೇ ಸ್ಥಾನದಲ್ಲಿದೆ. ಸಾಕ್ಷರತಾ ದರದಲ್ಲಿ ೧೬೮, ವಿಶ್ವ ಸಂತೋಷ ಮಾಪನದಲ್ಲಿ ೧೩೩, ಲಿಂಗ ತಾರತಮ್ಯದಲ್ಲಿ ೧೨೫, ಕನಿಷ್ಠ ವೇತನದಲ್ಲಿ ೧೨೪, ಉದ್ಯೋಗ ದರದಲ್ಲಿ ೪೨, ರೂಲ್ ಆಫ್ ಲಾ ಇಂಡೆಕ್ಸ್‌ನಲ್ಲಿ ೬೬, ಜೀವನದ ಗುಣಮಟ್ಟದಲ್ಲಿ ೪೩, ಆರ್ಥಿಕ ಅಭಿವೃದ್ಧಿಯಲ್ಲಿ ೫೧, ಪರಿಸರ ಕ್ಷಮತೆಯಲ್ಲಿ ೧೭೭ ಮತ್ತು ಜಿಡಿಪಿ ಯಲ್ಲಿ ೧೯೩ನೇ ಸ್ಥಾನವನ್ನು ಹೊಂದಿದ್ದು, ಇವೆಲ್ಲವೂ ದೇಶ ಎದುರಿಸುತ್ತಿರುವ
ಸಮಸ್ಯೆ ಗಳು ಮತ್ತು ಸವಾಲುಗಳಿಗೆ ಹಿಡಿದ ಕನ್ನಡಿಯಾಗಿದೆ.
ಅಲ್ಲದೆ, ದೇಶದಲ್ಲಿ ಲಕ್ಷಾಂತರ ಜನರು ಆಹಾರ ಇಲ್ಲದೆ ಬಳಲುವಂತಾಗಿದೆ. ನಿತ್ಯ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ೫ ವರ್ಷದೊಳಗಿನ ಸುಮಾರು ಶೇ.೪೦ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ದೇಶದ ಜನಸಂಖ್ಯೆಯ ಶೇ.೨೧.೯ ಜನರು ಬಡತನ ರೇಖೆಗಿಂತ ಬಳಲುತ್ತಿದ್ದಾರೆ. ಮುಂಬರುವ ಎರಡು ದಶಕಗಳಲ್ಲಿ ದುಡಿಯುವ ಜನಸಂಖ್ಯೆ 20 ಕೋಟಿ
ದಾಟಬಹುದು. ಆಗ ೧೫ರಿಂದ ೩೦ ವರ್ಷ ಹರೆಯದ ಶೇ.೩೦ರಷ್ಟು ಭಾರತೀಯರು ನಿರುದ್ಯೋಗಿಗಳಾಗುವ ಸಂಭವವಿದೆ.
ಇದೆಲ್ಲದಕ್ಕೂ ಜನಸಂಖ್ಯೆಯೇ ಮುಖ್ಯ ಕಾರಣವಾಗಿದೆ. ಆದ್ದರಿಂದ ಮೋಹನ್ ಭಾಗವತ್ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ರಾಜ್ಯಗಳ ವಿಧಾನಸಭೆಗಳು ಮತ್ತು ಸಂಸತ್ತಿನಲ್ಲೂ ಚರ್ಚೆ ನಡೆಸಿ, ಎಲ್ಲ ಧರ್ಮೀಯರಿಗೂ ಅನ್ವಯ ಆಗು ವಂತಹ ಕಾನೂನು ಜಾರಿ ಮಾಡಬೇಕಾದ ಅಗತ್ಯವಿದೆ.