Friday, 13th December 2024

ಅನ್‌ಲಾಕ್ ಜತೆ ಅಪಾಯ ಸುರಕ್ಷತೆ ಮುಖ್ಯವಾಗಲಿ

ಇಡೀ ರಾಜ್ಯವೀಗ ಲಾಕ್‌ಡೌನ್ ತೆರವಿನ ಬಗ್ಗೆ ಚಿಂತನೆ ನಡೆಸುತ್ತಿದೆ. ಲಾಕ್‌ಡೌನ್ ನಿಂದ ರಾಜ್ಯ ಹಾಗೂ ದೇಶದಲ್ಲಿ ಆರ್ಥಿಕ ಸಮಸ್ಯೆ ಹದಗೆಟ್ಟಿರಬಹುದು, ಆದರೆ ಜನರ ಜೀವ ಉಳಿಸುವಲ್ಲಿನ ವೈದ್ಯರ ಪ್ರಯತ್ನಗಳಿಗೆ ಯಶಸ್ಸು ದೊರೆತಿದೆಯೇ ಎಂಬು ದನ್ನು ವಿಶ್ಲೇಷಿಸಲು ಇದು ಸೂಕ್ತ ಸಮಯ.

ಜನರ ಮನೋಭಾವ ಲಾಕ್‌ಡೌನ್ ತೆರವುಗೊಳಿಸ ಬೇಕೆಂಬುದಾದರೆ, ಸರಕಾರದ ಚಿಂತನೆಯೇ ಬೇರೆ ರೀತಿಯದ್ದಾಗಿರುತ್ತದೆ.
ಆದರೆ ಈ ವೇಳೆ ಸವಾಲು ಎದುರಾಗಿರುವುದು ವೈದ್ಯಕೀಯ ಕ್ಷೇತ್ರಕ್ಕೆ. ಶೀತ-ಜ್ವರದ ರೂಪದಲ್ಲಿ ಕಾಣಿಸಿಕೊಂಡ ಕರೋನಾ ಇಂದು ಮರಣದ ರೂಪದಲ್ಲಿ ಕಾಡುತ್ತಿದೆ. ಹೊಸ ಹೊಸ ರೂಪಗಳಲ್ಲಿ ಕಾಣಿಸಿಕೊಂಡು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗುತ್ತಿದೆ. ಹಣ್ಣು
ತರಕಾರಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಫಂಗಸ್ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ.

ವೈದ್ಯಕೀಯ ಕ್ಷೇತ್ರ ದಿನೇ ದಿನೇ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರ ಸೂಚಿಸುವ ಆದೇಶಗಳು ಎಷ್ಟರಮಟ್ಟಿಗೆ ಪಾಲನೆಯಾಗಿದೆ ಎಂಬುದನ್ನು ಗಮನಿಸುವುದಾದರೆ, ಎರಡನೆ ಬಾರಿಗೆ ಜಾರಿಗೊಳಿಸಲಾದ ಲಾಕ್‌ಡೌನ್ ಯಶಸ್ವಿಗೊಂಡಿಲ್ಲ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ನ ಕಂಪ್ಯುಟೇಷನಲ್ ಹಾಗೂ ಡೇಟಾ ಸೈನ್ಸಸ್ ಪ್ರಕಾರ ಈ ಬಾರಿಯ ಲಾಕ್‌ಡೌನ್ ಕೇವಲ ಶೇ.36ರಷ್ಟು ಮಾತ್ರವೇ ಪರಿಣಾಮಬೀರಿದೆ.

ಮೇ.10ರಿಂದ 24ರವರೆಗೆ ಜಾರಿಗೊಳಿಸಲಾದ ಶೇ.80ರಷ್ಟು ಪರಿಣಾಮ ಬೀರಿತ್ತು. ಆದರೆ ಮೇ.19ರ ನಂತರ ಸೋಂಕಿತರ ಪ್ರಮಾಣ ಹಾಗೂ ಸಾವಿನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಜೂ.7ರವರೆಗೆ ಲಾಕ್‌ಡೌನ್ ಮುಂದುವರಿಸಲಾಯಿತು. ಈ ಎರಡನೆ ಹಂತದದಲ್ಲಿ ಜನರು ಓಡಾಟದಿಂದ ಶೇ.36ರಷ್ಟು ಮಾತ್ರವೇ ಯಶಸ್ವಿಗೊಂಡಿದೆ. ಜತೆಯಲ್ಲಿ ಸಾವಿನ ಸಂಖ್ಯೆಯೂ ಮುಂದು ವರಿದಿದೆ. ಆದರೆ ಬಹುದಿನಗಳು ಕಳೆದಿರುವುದರಿಂದ ಅನ್‌ಲಾಕ್ ಗೊಳಿಸುವಂತೆ ಜನರ ಅಭಿಪ್ರಾಯ ಹೆಚ್ಚುತ್ತಿದೆ. ಈ ಹಿನ್ನೆಲೆ ಯಲ್ಲಿ ಸರಕಾರವೂ ಹಂತ ಹಂತವಾಗಿ ಅನ್‌ಲಾಕ್‌ಗೆ ಭರವಸೆ ನೀಡಿದೆ.

ಆದರೆ ವೈದ್ಯಕೀಯ ಕ್ಷೇತ್ರಕ್ಕೆ ಕರೋನಾ ನಿರ್ಮೂಲನೆ ಸವಾಲಾಗಿ ಪರಿಣಮಿಸಿದೆ. ಕರೋನಾ ವಿರುದ್ಧ ಹೋರಾಟದಲ್ಲಿ 594
ಮಂದಿ ವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದಾರೆ. ಇವರೆಲ್ಲರ ಪರಿಶ್ರಮಕ್ಕೆ ಗೌರವ ದೊರೆಯಬೇಕಾದರೆ ಜನತೆ ವೈದ್ಯಕೀಯ ಇಲಾಖೆ ಸೂಚಿಸುವ ನಿಯಮಗಳನ್ನು ಪಾಲಿಸುವ ಮೂಲಕ ಕಾಳಜಿ ಪ್ರದರ್ಶಿಸಬೇಕಿದೆ.