Friday, 13th December 2024

ನಿಷ್ಠುರ ನಿಯಮ ಜಾರಿಯಾಗಲಿ

ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಸಾತ್ವಿಕ್ ಎಂಬ ಪುಟ್ಟ ಮಗುವನ್ನು ರಕ್ಷಿಸುವಲ್ಲಿ ಕಾರ್ಯಾಚರಣಾ ತಂಡಗಳು ಯಶಸ್ವಿಯಾಗಿದ್ದು ಸಮಾಧಾನಕರ ಸಂಗತಿ. ಬೆಳಗಾವಿ, ಕಲಬುರ್ಗಿಯಿಂದ ಬಂದಿದ್ದ ಎಸ್‌ಡಿಆರ್‌ ಎಫ್ ಮತ್ತು ಹೈದರಾಬಾದ್‌ನಿಂದ ಬಂದಿದ್ದ ಎನ್‌ಡಿಆರ್‌ಎಫ್ ತಂಡಗಳು ಸತತ ೨೦ ಗಂಟೆಗಳ ಕಾರ್ಯಾಚರಣೆ ನಡೆಸಿ ಕಂದನನ್ನು ಸುರಕ್ಷಿತವಾಗಿ ಹೊರಸೆಳೆದಿದ್ದು ಶ್ಲಾಘನೀಯ.

ಈ ತಂಡದವರ ಪರಿಶ್ರಮ ಮತ್ತು ಬದ್ಧತೆಗೊಂದು ಸಲಾಂ ಹೇಳಲೇಬೇಕು. ಆದರೆ ಇಲ್ಲಿ ವ್ಯಥೆಯುಂಟುಮಾಡುವುದು, ಕೆಲವರು ತೋರುವ ನಿರ್ಲಕ್ಷ್ಯ. ಕೊಳವೆಬಾವಿ ತೋಡಿಸಲು ಮುಂದಾಗುವವರು, ಆ ನಿಟ್ಟಿನಲ್ಲಿ ತೋರುವ ಉತ್ಸಾಹವನ್ನು ಕೊಂಚವೇ ಮುಂದುವರಿಸಿ, ತೋಡಿಸಿದ್ದು ಒಂದೊಮ್ಮೆ ವಿಫಲವಾದರೂ ಕೊಳವೆಬಾವಿಯ ಬಾಯಿ ಮುಚ್ಚಲು ಉದಾಸೀನ ತೋರುವುದೇ ದುಬಾರಿಯಾಗಿ ಪರಿಣಮಿಸಿಬಿಡುತ್ತದೆ.

ನೀರಮಾನ್ವಿ, ಝಂಜರವಾಡಿ, ದಾವಣಗೆರೆ, ದೇವರ ನಿಂಬರಗಿ, ಸಿಕ್ಕೇರಿ, ನಾಗತಾನಹಳ್ಳಿ, ಸೂಳೆಕೇರಿ ಹೀಗೆ ಹೇಳುತ್ತಾ ಹೋದರೆ ತೆರೆದ ಕೊಳವೆ ಬಾವಿಗೆ ಮಕ್ಕಳು ಬಿದ್ದು ದುರಂತದ ಅಂತ್ಯ ಕಂಡ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇಂಥ ಪೂರ್ವ ನಿದರ್ಶನಗಳ ಅರಿವಿದ್ದರೂ ಕೆಲವರು ಕೊಳವೆಬಾವಿಯ ಬಾಯಿ ಮುಚ್ಚಿಸಲು ನಿರ್ಲಕ್ಷ್ಯ ತೋರುವುದೇಕೆ ಎಂಬುದೇ ಅರ್ಥ ವಾಗದ ಸಂಗತಿ. ‘ಮಾನವ ಜನ್ಮ ದೊಡ್ಡದು, ಇದ ಹಾಳುಮಾಡಲುಬೇಡಿ ಹುಚ್ಚಪ್ಪಗಳಿರಾ’ ಎಂದಿದ್ದಾರೆ ದೊಡ್ಡವರು.

ಆದರೆ, ಈ ಜಾಣನುಡಿ ಕೆಲವರ ಕಿವಿಗೆ ಮುಟ್ಟುತ್ತಲೇ ಇಲ್ಲ ಎಂಬುದಕ್ಕೆ ಮತ್ತೆ ಮತ್ತೆ ಘಟಿಸುವ ಇಂಥ ದುರಂತಗಳೇ ಜ್ವಲಂತ ಸಾಕ್ಷಿ. ದೊಡ್ಡ ಮಟ್ಟದ ಪ್ರಾಕೃತಿಕ ವಿಕೋಪಗಳಾದಾಗ ಘಟಿಸುವ ಸಾವು-ನೋವುಗಳನ್ನು ತಡೆಯುವ ಶಕ್ತಿಯಂತೂ ಹುಲು ಮಾನವರ ಬಳಿಯಿಲ್ಲ; ಆದರೆ ಕನಿಷ್ಠ ಪಕ್ಷ ನಮ್ಮ ನಿರ್ಲಕ್ಷ್ಯದಿಂದ ಘಟಿಸುವ ದುರಂತಗಳನ್ನಾದರೂ ತಡೆಯಬಹುದಲ್ಲವೇ? ಕೊಳವೆಬಾವಿ ಕೊರೆಸುವವರಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗದಿದ್ದಲ್ಲಿ, ಇಂಥ ಮತ್ತಷ್ಟು ಪ್ರಸಂಗ ಗಳು ಘಟಿಸುವುದರಲ್ಲಿ ಅನುಮಾನವಿಲ್ಲ.

ಆದ್ದರಿಂದ ಆಳುಗರು ಎಚ್ಚೆತ್ತುಕೊಂಡು ಈ ವಿಷಯದಲ್ಲಿ ನಿಷ್ಠುರ ಕ್ರಮಗಳಿಗೆ ಮುಂದಾಗಲಿ. ಕಾರಣ, ಪ್ರಾಣಿಗಳು, ಸಸ್ಯಗಳು ಮತ್ತು ಮನುಷ್ಯರು ಸೇರಿದಂತೆ ಯಾವ ಜೀವರಾಶಿಗಳ ಜೀವವೂ ಅಗ್ಗವಲ್ಲ.