Sunday, 13th October 2024

ಶಾಲೆಗಳ ಆರಂಭ : ಎಚ್ಚರಿಕೆ ಬಹುಮುಖ್ಯ

ಸರಕಾರ ಶಾಲೆಗಳ ಆರಂಭಕ್ಕೆ ಮುಂದಾಗಿದೆ. ಆದರೆ, ಶಾಲೆಗಳ ಆರಂಭದಲ್ಲಿ ಮುನ್ನಚ್ಚರಿಕೆ ಬಹಳ ಮುಖ್ಯ. ಶಾಲೆಗಳಲ್ಲಿ ಮೈಮರೆತರೆ ಆಗುವ ಅನಾಹುತಗಳ ಪಟ್ಟಿ ಬಹುದೊಡ್ಡದ್ದಿದ್ದು, ಇದನ್ನು ನಿರ್ವಹಣೆ ಮಾಡುವ ಕಡೆಗೆ ಸರಕಾರ ಮತ್ತು ಶಾಲೆಗಳು ಗಮನ ನೀಡುವುದು ಅನಿವಾರ್ಯ.

ರಾಜ್ಯದಲ್ಲಿ ಈಗಾಗಲೇ ಎರಡನೇ ಅಲೆ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಮೂರನೇ ಅಲೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮೂರನೇ ಅಲೆ ಮಕ್ಕಳಲ್ಲಿ ಅಪಾಯಕಾರಿಯಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ೧೮ರ ಮೇಲ್ಪಟ್ಟವರನ್ನು ಲಸಿಕಾಕರಣ ಮಾಡುವಲ್ಲಿ ಪ್ರಯತ್ನಗಳು ನಡೆದಿವೆ. ಆದರೆ, ಅದಕ್ಕಿಂತ ಚಿಕ್ಕ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆಯೂ ಇನ್ನೂ ಆಗಿಲ್ಲ. ಹೀಗಾಗಿ, ಶಾಲೆ ಆರಂಭ ಎಂಬುದು ಬಹು ಕಷ್ಟದ ವಿಚಾರ ಎಂಬ ಅಭಿಪ್ರಾಯವಿತ್ತು.

ಆದರೆ, ಕಳೆದ ಎರಡು ವರ್ಷ ಶಾಲೆ ಕಾಲೇಜುಗಳು ಇಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಆನ್‌ಲೈನ್ ಕ್ಲಾಸ್‌ನಲ್ಲಿ ಅನೇಕ ಗೊಂದಲಗಳಿವೆ. ಹೀಗಾಗಿ, ಶಾಲೆ ಆರಂಭವೂ ಕೂಡ ಅನಿವಾರ್ಯ. ಹೀಗಾಗಿ, ಸರಕಾರ ಇದೀಗ ಶಾಲೆಗಳ ಆರಂಭಕ್ಕೆ ನಿರ್ಧಾರ ಮಾಡಿದೆ. ಅದಕ್ಕಾಗಿ ಕೆಲವು ಮಾರ್ಗಸೂಚಿ ಗಳನ್ನು ಬಿಡುಗಡೆ ಮಾಡಿದೆ. ಮಕ್ಕಳು ಮಾರ್ಗಸೂಚಿ ಪಾಲನೆ ಮಾಡುವುದು ಕಷ್ಟ.

ಶಾಲೆಗಳು, ಸರಕಾರ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮಕ್ಕಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಮೂರನೇ ಅಲೆಯ ಭೀತಿಯಲ್ಲಿ ಮಕ್ಕಳ ಭವಿಷ್ಯವನ್ನು ಬಲಿ ಕೊಡುವುದು ತರವಲ್ಲ, ಅದರಂತೆಯೇ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ಜೀವವನ್ನು ಹಗುರವಾಗಿ ಪರಿಗಣಿಸು ವಂತಿಲ್ಲ. ಭವಿಷ್ಯ ಮತ್ತು ಜೀವ ಎರಡನ್ನೂ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಯತ್ನಗಳಾಗಬೇಕಿದೆ.