ನಾಲ್ಕನೇ ಅಲೆಯ ಆತಂಕದ ನಡುವೆಯೂ ನಿಗದಿಯಂತೆ ಮೇ 16 ರಿಂದ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. ಮೂರನೇ ಅಲೆ ಇರುವಾಗಲೂ ಶಾಲೆಗಳನ್ನು ನಡೆಸಲಾಗಿದ್ದು, ಆಗ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂಬ ಧೈರ್ಯ
ದಲ್ಲಿ ಶಿಕ್ಷಣ ಇಲಾಖೆಯು ಈಗ ಮತ್ತೆ ಶಾಲೆಗಳ ಆರಂಭಕ್ಕೆ ನಿರ್ಧರಿಸಿದೆ.
ಕೋವಿಡ್‌ನಿಂದಾಗಿ ಒಂದೂವರೆ ವರ್ಷದಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕಡಿಮೆ ಯಾಗಿದ್ದು, ಅದಕ್ಕಾಗಿ ಇಲಾಖೆಯು ವಿವಿಧ ಕಾರ್ಯಕ್ರಮಗಳ ಮೂಲಕ ಈ ಸಾಲಿನ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಕೆಯು ಎಷ್ಟು ಮುಖ್ಯವೋ ಆರೋಗ್ಯವೂ ಅಷ್ಟೇ ಮುಖ್ಯವಾದದ್ದು. ಮೂರನೇ ಅಲೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸದೇ ಇರುವುದಕ್ಕೆ ಮುಖ್ಯ ಕಾರಣ ಲಸಿಕಾಕರಣ. ಎರಡನೇ ಅಲೆಯಲ್ಲಿ ಪೆಟ್ಟು ತಿಂದ ಅನೇಕ ಕುಟುಂಬಗಳು ಮೂರನೇ ಅಲೆ ಬರುವಷ್ಟರೊಳಗೆ ಲಸಿಕೆ ಪಡೆದಿದ್ದವು. ಆ ಲಸಿಕೆಯ ಶಕ್ತಿ ಆರು ತಿಂಗಳವರೆಗೆ ಇತ್ತು.
ಹೀಗಾಗಿ ಮೂರನೇ ಅಲೆ ಪರಿಣಾಮ ಅಷ್ಟೊಂದು ಆಗಲಿಲ್ಲ. ಆದರೆ ಇದೀಗ ಎರಡನೇ ಡೋಸ್ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ ಎಂದು ಹೇಳಲಾಗುವುದಿಲ್ಲ. ವಿಜ್ಞಾನಿಗಳ ಪ್ರಕಾರ ಒಂದು ಲಸಿಕೆಯ ಪರಿಣಾಮ ಆರು ತಿಂಗಳಿಗಿಂತ ಹೆಚ್ಚಿಗೆ ಇರುವುದಿಲ್ಲ ಎನ್ನಲಾಗಿದೆ. ಜುಲೈ ವೇಳೆಗೆ ಬರುವ ನಾಲ್ಕನೇ ಅಲೆಯ ಸಂದರ್ಭದಲ್ಲಿ ಎಲ್ಲರಲ್ಲೂ ಎರಡನೇ ಡೋಸ್‌ನ ಶಕ್ತಿ ಕಡಿಮೆಯಾಗಿರುತ್ತದೆ. ಇಂತಹ ಸಮಯದಲ್ಲಿ ಮತ್ತೊಂದು ಡೋಸ್ ಲಸಿಕಾಕರಣ ಆಗಬೇಕಿದೆ. ಮುಖ್ಯವಾಗಿ ಶಾಲೆಗಳು ಪ್ರಾರಂಭವಾಗುವುದರಿಂದ ಮಕ್ಕಳಿಗೆ ಲಸಿಕೆ ಹಾಕಿಸ ಬೇಕಿದೆ. ಶಾಲೆ ಶುರುವಾಗುವುದಕ್ಕಿಂತ ಮುಂಚೆ ಮಕ್ಕಳಿಗೆ ಲಸಿಕೆ ಹಾಕಿ, ಕೋವಿಡ್ ನಿಯಮಗಳನ್ನು ಪಾಲಿಸುವ ಬಗ್ಗೆ ಮಕ್ಕಳಿಗೆ ತರಬೇತಿ ನೀಡಬೇಕಾದ ಅಗತ್ಯವಿದೆ.
ಅಲ್ಲದೇ, ಶಿಕ್ಷಕರು ಕೂಡ ಶಾಲೆಗಳಲ್ಲಿ ಕೋವಿಡ್ ನಿಯಮಗಳ ಪಾಲನೆಗೆ ಹೆಚ್ಚಿನ ನಿಗಾ ವಹಿಸುವ ಮೂಲಕ ವಿದ್ಯಾರ್ಥಿಗಳ ಸುರಕ್ಷತೆ ಯತ್ತ ಗಮನಹರಿಸಬೇಕಿದೆ.