ಯುದ್ಧಪೀಡಿತ ಭೂಮಿ ಉಕ್ರೇನ್ನಿಂದ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣ ಅಪೂರ್ಣವಾಗಿದ್ದು, ಪರ್ಯಾಯ ಕ್ರಮಗಳ ಬಗ್ಗೆ ರಾಜ್ಯ ಸರಕಾರ ಯೋಚಿಸುತ್ತಿದೆ, ಸೂಕ್ತ ಮಾರ್ಗವೊಂದನ್ನು ಆದಷ್ಟು ಬೇಗ ಕಂಡುಹಿಡಿದು ವಿದ್ಯಾರ್ಥಿಗಳ ಶಿಕ್ಷಣ ಪೂರ್ಣ ಗೊಳ್ಳುವಂತೆ ನೋಡಿಕೊಳ್ಳಲಿ.
ಆದರೆ ಇನ್ನೊಂದು ಅಂಶವನ್ನು ಮುಖ್ಯಮಂತ್ರಿಗಳು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಗಮನಿಸಬೇಕಿದೆ. ರಾಷ್ಟ್ರೀಯ ಅರ್ಹತೆ ಪರೀಕ್ಷೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ನಲ್ಲಿ ರಾಜ್ಯಕ್ಕೆ ದೊರೆತ ಸೀಟುಗಳಲ್ಲಿ ಕೌನ್ಸೆಲಿಂಗ್ ನಂತರ ಹಂಚಿಕೆಯಾಗದೇ ಉಳಿದಿರುವ ಸೀಟುಗಳನ್ನು ರಾಜ್ಯ ಸರಕಾರವು ಕೇಂದ್ರಕ್ಕೆ ಮರಳಿಸುತ್ತಿದ್ದು, ಈ ಕ್ರಮ ಸರಿಯಲ್ಲ. ರಾಜ್ಯದ ಕಿರಿಯ ವೈದ್ಯರು ವೈದ್ಯಕೀಯ ಸ್ನಾತಕೋತ್ತರ ಪದವಿಯ ಸೀಟುಗಳನ್ನು ಪಡೆಯಲು ಅನುಕೂಲವಾಗುವಂತೆ 2022ರ ಮಾರ್ಚ್ 12ರಂದು ಕಟ್ಆ- ಅಂಕಗಳನ್ನು ಕಡಿಮೆ ಮಾಡಲಾಗಿತ್ತು.
ಇದರಿಂದಾಗಿ ಕರ್ನಾಟಕದ ಸೇವಾನಿರತ ವೈದ್ಯರು ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದರು. ಆದರೆ, ರಾಜ್ಯ ಸರಕಾರವು ಸೇವಾನಿರತ ವೈದ್ಯರಿಗೆ ಕಾಯ್ದಿರಿ ಸಿದ್ದ ಸೀಟುಗಳನ್ನು ಕೇಂದ್ರ ಸರಕಾರಕ್ಕೆ ಮಾರ್ಚ್ 16ರಂದು ಮರಳಿಸಿದೆ. ಈ ನಿರ್ಧಾರ ದಿಂದ ರಾಜ್ಯದ ವಿದ್ಯಾರ್ಥಿಗಳು ವೈದ್ಯಕೀಯ ಸೀಟುಗಳಿಂದ ವಂಚಿತರಾಗಿದ್ದಾರೆ. ತಮಿಳುನಾಡಿನಲ್ಲಿ ಕೌನ್ಸೆಲಿಂಗ್ ನಂತರ ಉಳಿದ ಸೀಟುಗಳನ್ನು ಮರುಹಂಚಿಕೆ ಮಾಡುತ್ತಾರೆ.
ಕಟ್ ಆಫ್ ಅಂಕ ಕಡಿಮೆ ಮಾಡುವ ಮೂಲಕ ರಾಜ್ಯದ ಅಭ್ಯರ್ಥಿಗಳಿಗೆ ಉಳಿಕೆ ಸೀಟುಗಳು ಸಿಗುವಂತೆ ನೋಡಿಕೊಳ್ಳುತ್ತಾರೆ. ನಾಡಿನ ಹಕ್ಕುಗಳನ್ನು ಅವರು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಉಳಿಕೆ ಸೀಟುಗಳನ್ನು ಕೇಂದ್ರಕ್ಕೆ ಮರಳಿಸುವ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ವಿಷಯದಲ್ಲಿ ತಮಿಳುನಾಡಿನ ಸರಕಾರದಿಂದ ನಮ್ಮ ರಾಜ್ಯ ಸರಕಾರ ಕಲಿಯಬೇಕಿದೆ.
ನೀಟ್ ಪರೀಕ್ಷೆ ಜಾರಿಯಾದ ಬಳಿಕ ರಾಜ್ಯದ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್ ಹಾಗೂ ಎಂಡಿ ಸೀಟುಗಳು ಪರಭಾಷಿಕರ ಪಾಲಾಗುತ್ತಿವೆ. ಇಂತಹ ಅಸಮಾಧಾನವೊಂದು ಸಾರ್ವಜನಿಕ ವಲಯದಲ್ಲಿ ಹೊಗೆಯಾಡುತ್ತಿರುವಾಗ ರಾಜ್ಯದ ಪಟ್ಟಿಯಲ್ಲಿರುವ ಸೀಟು ಗಳನ್ನು ಮತ್ತೆ ಕೇಂದ್ರಕ್ಕೆ ಮರಳಿಸುವುದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯದ ಪಾಲಿನ ಸೀಟುಗಳನ್ನು ಇಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ.