Friday, 13th December 2024

ಅಪಾಯಕಾರಿ ಬೆಳವಣಿಗೆ ಸ್ವಯಂ ಜಾಗ್ರತೆ ಮುಖ್ಯ

#corona

ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ದ್ವಿಗುಣಗೊಂಡಿವೆ. ಇದನ್ನು ಅಪಾಯಕಾರಿ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರಿಂದ ಜನತೆ ಮತ್ತೊಮ್ಮೆ ಸ್ವಯಂ ಜಾಗ್ರತೆ ವಹಿಸಬೇಕಿರುವ ಅವಶ್ಯಕತೆ ಕಂಡುಬರುತ್ತಿದೆ.

ಫೆಬ್ರವರಿ ಅಂತ್ಯದವರೆಗೆ ಮುನ್ನೂರರಿಂದ ನಾಲ್ಕುನೂರರಷ್ಟಿದ್ದ ದೈನಂದಿನ ಪ್ರಕರಣಗಳ ಸಂಖ್ಯೆ ಪ್ರಸ್ತುತ ಐನೂರರಿಂದ ಏಳು ನೂರಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ನೂರರಿಂದ ಇನ್ನೂರರಷ್ಟಿದ್ದ ಪ್ರಕರಣಗಳ ಸಂಖ್ಯೆ ಇದೀಗ ಮೂನ್ನೂರರಿಂದ ನಾಲ್ಕು
ನೂರರವರೆಗೆ ಹೆಚ್ಚಳವಾಗಿರುವುದು ಆತಂಕಕಾರಿ ಬೆಳವಣಿಗೆ. ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಒಂದೇ ದಿನ ಹದಿಮೂರು ಸಾವಿರ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಹಲವು ಸುರಕ್ಷಿತ ಕ್ರಮಗಳನ್ನು ಅನುಸರಿಸುವಂತೆ ಆರೋಗ್ಯ ಸಚಿವ ಸುಧಾಕರ್ ಸೂಚಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಸ್ವಯಂ ಜಾಗ್ರತೆ ವಹಿಸುವ ಅವಶ್ಯಕತೆಯಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಜತೆಗೆ ರಾಜ್ಯ ಸರಕಾರ
ಪ್ರಕಟಿಸಿರುವ ಮಾರ್ಗಸೂಚಿಯ ಪಾಲನೆ ಬಹುಮುಖ್ಯ. ಮಾರ್ಗಸೂಚಿ ಅನ್ವಯ ಮದುವೆ, ಶವಸಂಸ್ಕಾರ, ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವವರ ಸಂಖ್ಯೆ ಮಿತಿಗೊಳಿಸಲಾಗಿದೆ.

ಮದುವೆಗಳಿಗೆ 200, ಒಳಾಂಗಣ, ಹೊರಾಂಗಣದಲ್ಲಿ 500, ಜನ್ಮದಿನ ಹಾಗೂ ಇತರ ಸಮಾರಂಭಗಳಿಗೆ 100, ಶವಸಂಸ್ಕಾರಕ್ಕೆ 100, ಅಂತ್ಯಕ್ರಿಯೆಗೆ 50, ಧಾರ್ಮಿಕ ಆಚರಣೆಗಳಿಗೆ 500, ರಾಜಕೀಯ ಕಾರ್ಯಕ್ರಮಗಳಿಗೆ 500 ಜನರಿಗೆ ಮೀರದಂತೆ ಆಚರಿಸಲು ಅನುಮತಿ ನೀಡಲಾಗಿದೆ. ಅಂತರ ರಾಜ್ಯ ಪ್ರಯಾಣದಿಂದ ಸೋಂಕು ಹರಡುವ ಅಪಾಯ ತಗ್ಗಿಸಲು ಪರೀಕ್ಷೆಯ ಪ್ರಮಾಣ ಹೆಚ್ಚಳಕೆ ಆದೇಶಿಸಲಾಗಿದೆ. ಗಡಿಭಾಗಗಳಲ್ಲಿಯೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಸ್ವಯಂ ಜಾಗ್ರತೆವಹಿಸಬೇಕಿರುವುದು ಇಂದಿನ ಬಹುಮುಖ್ಯ ಅಗತ್ಯ.