Wednesday, 11th December 2024

ಸದನದಲ್ಲಿ ನಿರುತ್ಸಾಹವೇಕೆ?

ಬೆಳಗಾವಿ ಅಧಿವೇಶನದ ಮೊದಲ ಅರ್ಧ ಅವಧಿ ಮುಗಿದಿದೆ. ಇಂದಿನಿಂದ ಇನ್ನೊಂದು ಅವಧಿ ಶುರುವಾಗಲಿದೆ. ಮೊದಲ ಅರ್ಧ ಅವಧಿಯನ್ನು ಗಮನಿಸದರೆ ಈ ರಾಜ್ಯದಲ್ಲಿ ಸಾಮಾನ್ಯ ಜನರನ್ನು ಬಾಧಿಸುವ ಯಾವುದೇ ಸಮಸ್ಯೆಗಳಿಲ್ಲ, ಎಲ್ಲವೂ ಸುಭಿಕ್ಷ ವಾಗಿ, ಸುಸೂತ್ರವಾಗಿ ನಡೆಯುತ್ತಿವೆ ಎಂದು ಭಾಸವಾದರೆ ಅಚ್ಚರಿಯೇನಿಲ್ಲ. ಏಕೆಂದರೆ ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳತ್ತ ಕಳೆದ ಐದು ದಿನಗಳ ಅಧಿವೇಶನದಲ್ಲಿ ಚರ್ಚೆಗೇ ಬರಲಿಲ್ಲ.

ಎಲ್ಲ ಶಾಸಕರಲ್ಲೂ ನಿರುತ್ಸಾಹವೇ ಹೆಚ್ಚಾಗಿತ್ತು. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಒಬ್ಬಿಬ್ಬರು ಶಾಸಕರನ್ನು ಬಿಟ್ಟರೆ ಬಹುತೇಕರು ತುಟಿ ಪಿಟಿಕ್ ಅಂದಿಲ್ಲ. ಶಾಸಕರಲ್ಲಿ ಅಂತಹ ನಿರುತ್ಸಾಹ ನೋಡಿದಾಗ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಬೆಳಗಾವಿ ಯಲ್ಲಿ ಅಧಿವೇಶನ ಮಾಡುವ ಅಗತ್ಯವಿತ್ತೇ? ಎನಿಸದಿರದು. ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಬಹಳಷ್ಟು ಶಾಸಕರು ಸದನಕ್ಕೆ ಬಂದೇ ಇಲ್ಲ. ಎಲ್ಲಿ ನೋಡಿದರೂ ಸದನ ದಲ್ಲಿ ಖಾಲಿ ಖುರ್ಚಿಗಳೇ ಕಣ್ಣಿಗೆ ರಾಚುತ್ತಿದ್ದವು.

ಇದನ್ನೆಲ್ಲ ನೋಡಿದಾಗ ಈ ರೀತಿ ತೆರಿಗೆದಾರನ ಹಣವನ್ನು ಪೋಲು ಮಾಡಬಹುದೇ? ಎನ್ನಿಸದಿರದು. ಕರ್ನಾಟಕ ಏಕೀಕರಣ  ವಾದ ದಿನದಿಂದಲೂ ಆಡಳಿತ ನೀತಿಗಳಲ್ಲಿ, ಆರ್ಥಿಕ ನೀತಿಗಳಲ್ಲಿ ತಾರತಮ್ಯವನ್ನೇ ಎದುರಿಸುತ್ತಿರುವ ಉತ್ತರ ಕರ್ನಾಟಕದ ಜಿಗಳ ಭೌಗೋಳಿಕ, ಸಾಮಾಜಿಕ, ಆರ್ಥಿಕ, ಭಾಷಿಕ ಹಾಗೂ ಸಾಂಸ್ಕೃತಿಕ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಬೇಕಿದೆ. ಬೆಂಗಳೂರು ಕೇಂದ್ರಿತ ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಉತ್ತರ ಕರ್ನಾಟಕದ ಜನರ
ಸಮಸ್ಯೆಗಳಿಗೆ ಸರಕಾರಗಳು ಹೆಚ್ಚು ಗಮನ ನೀಡುತ್ತಿಲ್ಲ ಎಂಬ ಕಾರಣದಿಂದಲೇ ಪ್ರತಿ ವರ್ಷ ಸುವರ್ಣಸೌಧದಲ್ಲಿ ಅಧಿವೇಶನ ಹಮ್ಮಿಕೊಳ್ಳಲಾಗುವುದು.

ಇದನ್ನು ಅರಿತಾದರೂ ಸರಕಾರ ಮತ್ತು ಪ್ರತಿಪಕ್ಷಗಳು ಆ ಪ್ರಾಂತ್ಯದ ಜಿಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ವರ್ಷಕ್ಕೊಮ್ಮೆ ಗಂಭೀರ ಚರ್ಚೆ ನಡೆಸಬೇಕು. ಸದನದಲ್ಲಿ ನಡೆಯುವ ಚರ್ಚೆಗಳು ಬಾಹ್ಯ ಸಮಾಜದ ಕೋಟ್ಯಂತರ ಮತ ದಾರರು ಮತ್ತು ಸಾಮಾನ್ಯ ಜನರ ಧ್ವನಿಯನ್ನು ಪ್ರತಿನಿಧಿಸುತ್ತವೆ. ಇದನ್ನು ಜನಪ್ರತಿನಿಧಿಗಳು ಅರ್ಥೈಸಿಕೊಂಡು ಸದನದಲ್ಲಿ ಉತ್ಸಾಹ ಭರಿತವಾಗಿ ಚರ್ಚೆ ಮಾಡಬೇಕು.

Read E-Paper click here