Friday, 13th December 2024

ಅಧಿವೇಶನದ ಮಹತ್ವ ಅರಿವಾಗಲಿ

ಕಳೆದ ವಾರದಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದೆ. ಬಜೆಟ್ ಮಂಡಿಸಿದ ಒಂದು ದಿನ ಬಿಟ್ಟರೆ ಅಽವೇಶನದಲ್ಲಿ ಯಾವೊಬ್ಬ ಶಾಸಕರೂ ಉತ್ಸಾಹ ತೋರುತ್ತಿಲ್ಲ. ಚುನಾವಣೆಯ ಗುಂಗಿನಲ್ಲಿರುವ ನಮ್ಮ ಜನಪ್ರತಿನಿಧಿಗಳು ಅಧಿವೇಶನಕ್ಕೆ ಅಷ್ಟೊಂದು ಮಹತ್ವ ಕೊಟ್ಟಂತೆ ಕಾಣುತ್ತಿಲ್ಲ.

ನಮ್ಮ ಜನಪ್ರತಿನಿಧಿಗಳು ಅಭಿವೃದ್ಧಿಯ ಮಂತ್ರವನ್ನು ಸದಾ ಜಪಿಸುತ್ತಾರೆ. ಆದರೆ ಅದಕ್ಕೆ ಪೂರಕವಾಗುವ ಯೋಜನೆ, ಅನುದಾನಗಳು ಜಾರಿಯಾಗ ಬೇಕಾದರೆ, ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಮೊದಲು ಅದರ ಮಂಡನೆ ಯಾಗಬೇಕು, ನಂತರ ಅದನ್ನು ಅನುಷ್ಠಾನಕ್ಕೆ ತರಲು ಇರುವ  ಸಾಂವಿಧಾನಿಕ ಮಾನ್ಯತೆಗೆ, ಅದರ ಸಾಧಕ ಬಾಧಕಗಳ ಕುರಿತು ಮಾಡಬೇಕಾದ ಅರ್ಥ ಪೂರ್ಣ ಚರ್ಚೆಗೆ ಅನುವು ಮಾಡಿಕೊಡಬೇಕು ಎನ್ನುವ ನಡಾವಳಿಗೆ ಬದ್ಧತೆ ತೋರುತ್ತಿಲ್ಲ.

ಪ್ರಸ್ತುತ ಸನ್ನಿವೇಶವನ್ನೇ ಗಮನಿಸಿದರೆ, ಬರಲಿರುವ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆಯಷ್ಟೇ. ಜನ ಪ್ರತಿನಿಧಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸಾಧನಕ್ಕೆ ಅಧಿವೇಶನದ ಚರ್ಚೆಗಳೂ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಬೀರುತ್ತವೆ ಎಂಬ ತಿಳಿವಳಿಕೆಯಾದರೂ ಎಂತಹ ಜನಪ್ರತಿನಿಧಿ ಗಾದರೂ ಇರಲೇಬೇಕು. ಹಾಗಿರುವಾಗ, ನಮ್ಮ ಶಾಸಕ ಮಹೋದಯರು, ಇತರ ರಾಜಕಾರಣಿಗಳ ಕಾಲೆಳೆಯುವುದರ ಕಾಲಹರಣ ಮಾಡುತ್ತಿದ್ದಾರೆ.

ನಮ್ಮ ಮತದಾರರಿಗೆ ನಾವು ಬದ್ಧರು, ನಮ್ಮ ಕ್ಷೇತ್ರದ ಅಭಿವೃದ್ಧಿಗೆ ನಾವು ಬದ್ಧರು ಎಂಬುದನ್ನು ಚರ್ಚೆಯ ಮೂಲಕ ಮಾಡಿ ತೋರಿಸಿದ ಒಬ್ಬೇ ಒಬ್ಬ ಶಾಸಕರೂ ಇಲ್ಲ. ಕಳೆದ ಬಾರಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಅಽವೇಶನವಂತೂ ಶಾಸಕರ ಕಾಲಹರಣಕ್ಕಾಗಿ ಮೀಸಲಾಗಿದೆಯೇನೋ ಎಂಬಂತಿತ್ತು. ಈ ಬಾರಿ ಅಧಿವೇಶನ ಇದೆಯೋ ಇಲ್ಲವೋ ಎಂಬಂತಿದೆ. ಒಟ್ಟಿನಲ್ಲಿ ನಮ್ಮ ಎಲ್ಲ ಶಾಸಕರು ಅಧಿವೇಶನವನ್ನು ಗಂಭೀರವಾಗಿ ತೆಗೆದುಕೊಳ್ಳುವ ದಿನಗಳು ಎಂದು ಬರುತ್ತವೋ ತಿಳಿಯದು.

ನಮ್ಮಿಂದ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಪ್ರತಿಷ್ಠೆಯನ್ನು ಪಣಕ್ಕೆ ಒಡ್ಡದೆ, ತಮ್ಮನ್ನು ಸದಾ ಗಮನಿಸುವವರು ಇರುತ್ತಾರೆ ಎಂಬುದನ್ನು ತಿಳಿದು, ಜನರ ಜ್ವಲಂತ ಸಮಸ್ಯೆಗಳ ಕುರಿತು ಪಕ್ಷಾತೀತವಾಗಿ ಅರ್ಥಪೂರ್ಣ ಚರ್ಚೆಯಲ್ಲಿ ತೊಡಗಬೇಕು. ತಮ್ಮ ಜವಾಬ್ದಾರಿಯುತ ನಡೆ-ನುಡಿಯಿಂದ ತರುಣ ಪೀಳಿಗೆಗೆ ಮಾದರಿ ಶಾಸಕರಾಗಬೇಕು. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥಪೂರ್ಣ ಕೊಡುಗೆ ನೀಡಬೇಕು.