Saturday, 14th December 2024

ಪ್ರಗತಿ ಪಥದ ಬಜೆಟ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ೩.೨೭ ಲಕ್ಷ ಕೋಟಿ ಗಾತ್ರದ ತಮ್ಮ ೧೪ನೇ ಬಜೆಟ್ ರಾಜ್ಯವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಹಜವಾಗಿಯೇ ಗ್ಯಾರಂಟಿ ಗಳನ್ನು ಈಡೇರಿಸಲು ತೆರಿಗೆ ಹೊರೆ ಹಾಕಲಾಗುತ್ತದೆ ಎಂದು ಭಾವಿಸಲಾಗಿತ್ತು.

ಆದರೆ ಕಳೆದ ಕೆಲ ವರ್ಷಗಳಲ್ಲಿ ನೋಟು ರದ್ದತಿ, ಕೋವಿಡ್ ಸಾಂಕ್ರಾಮಿಕತೆ, ರಾಜಕೀಯ ಅಸ್ಥಿರತೆ, ಅನಿಯಂತ್ರಿತ ಬೆಲೆ ಏರಿಕೆ, ಅಭಿವೃದ್ಧಿಯ ಮುನ್ನೋಟದ ಕೊರತೆಯಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದನ್ನು ಅರಿತಿರುವ ಸಿದ್ದರಾಮಯ್ಯ ಅವರು ಯಾವುದೇ ತೆರಿಗೆ ಹೊರೆ ಹಾಕಿಲ್ಲ. ಚುನಾವಣೆಗೂ ಮುನ್ನ ಘೋಷಿಸಿದಂತೆ ಗ್ಯಾರಂಟಿಗಳಿಗೆ ಆದ್ಯತೆ ನೀಡುವ ಮೂಲಕ ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ಜನರಿಗೆ ಹೆಚ್ಚಿನ ಹೊರೆಯಾಗದಂತೆ ಹೊಂದಿಸಲಾಗಿದೆ.

ಗ್ಯಾರಂಟಿ ಭರವಸೆಯ ನಂತರ ರಾಜ್ಯದ ಅರ್ಥಿಕ ಸ್ಥಿತಿ ಚಿಂತಾಜನಕವಾಗುತ್ತದೆ, ಅಯೋಮಯ ವಾಗುತ್ತದೆ, ರಾಜ್ಯ ದಿವಾಳಿಯಾಗುತ್ತದೆ, ವಿಶೇಷ ಹೊಸ ತೆರಿಗೆ ಇಲ್ಲದೇ ಅಯವ್ಯಯವನ್ನು ಟ್ಯಾಲಿ ಮಾಡಲಾಗದು ಎಂದೆ ಬೊಬ್ಬೆ ಹೊಡೆದವರಿಗೆ ಸಿದ್ದರಾಮಯ್ಯನವರು ಈ ಬಜೆಟ್ ಮೂಲಕ
ಸರಿಯಾದ ಉತ್ತರ ನೀಡಿದ್ದಾರೆ. ಕೊರತೆಯನ್ನು ಇತಿಮಿತಿಯಲ್ಲಿ ಇರಿಸಿಕೊಂಡು ತಮ್ಮ ಹಣಕಾಸು ಚಾಕಚಕ್ಯತೆಯನ್ನು ಪ್ರದರ್ಶಿಸಿದ್ದಾರೆ. ೫ ಗ್ಯಾರಂಟಿಗಳನ್ನು ಜಾರಿಗೊಳಿಸಲು ಬೇಕಾದ ಹಣಕಾಸನ್ನು ಹೊಂದಿಸಿದ ನಂತರವೂ ರಾಜ್ಯದ ಅಭಿವೃದ್ಧಿಗೆ ಬೇಕಾದ ಸಂಪನ್ಮೂಲಕ್ಕೆ ಯಾವುದೇ ತೊಂದರೆಯಾಗದಂತೆ ಬಜೆಟ್ ಹಂಚಿಕೆ ಮಾಡಲಾಗಿದೆ.

ಈ ಬಜೆಟ್‌ನಲ್ಲಿ ಬಡವರು, ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಭೂ
ರಹಿತ ಕೃಷಿ ಕಾರ್ಮಿಕರು ಮತ್ತು ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ಒದಗಿಸಲಾಗಿದೆ. ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ
ಸುಧಾರಣೆ ಹಾಗೂ ತೆರಿಗೆ ಸೋರಿಕೆಯನ್ನು ತಡೆಗಟ್ಟುವುದರ ಜತೆಗೆ ಸರಕಾರದ ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಕ್ರಮ ವಹಿಸಿರು ವುದು ಸ್ವಾಗತಾರ್ಹವಾದದ್ದು. ಈ ಬಜೆಟ್ ರಾಜ್ಯವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯುಯುವುದು ನಿಶ್ಚಿತ.