ಕಳೆದ ಒಂದು ವಾರದಲ್ಲೇ ರಸ್ತೆ ಗುಂಡಿಗಳ ಕಾರಣದಿಂದಾಗಿ ಬೆಂಗಳೂರಿನಲ್ಲಿ ಎರಡು ಜೀವಗಳು ಬಲಿಯಾಗಿವೆ. ಒಂದು ವರ್ಷದ ಅವಧಿಯಲ್ಲಿ ರಸ್ತೆ ಗುಂಡಿಗಳಿಂದಾಗಿ ಐದು ಸಾವು ಸಂಭವಿಸಿವೆ. ಪ್ರತಿ ವರ್ಷ ಬೆಂಗಳೂರಿನ ರಸ್ತೆ ಗುಂಡಿಗಳ ಕಾರಣ ದಿಂದ ಹಲವು ಸಾವುಗಳು ಸಂಭವಿಸಿದರೂ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಕಣ್ಮುಚ್ಚಿ ಕುಳಿತಂತಿದೆ.
ನ್ಯಾಯಾಲಯವು ಪದೇ ಪದೇ ಕಿವಿ ಹಿಂಡಿದರೂ ಬಿಬಿಎಂಪಿ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡಿಲ್ಲ. ಸಾರ್ವಜನಿಕರ ಅತ್ಯಂತ ಮೂಲ ಅಗತ್ಯ ಎನಿಸಿದ ರಸ್ತೆ ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಐದು ವರ್ಷಗಳಲ್ಲಿ ? 20060 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಮಂಡಲ ಅಧಿವೇಶನದಲ್ಲಿ ಮಾಹಿತಿ ನೀಡಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 12,974 ಕಿಲೊಮೀಟರ್ ಉದ್ದದ ರಸ್ತೆ ಜಾಲ ಇದೆ. ಅಂದರೆ, ಪ್ರತೀ ಕಿಲೊಮೀಟರ್ ರಸ್ತೆಗೆ ಐದು ವರ್ಷಗಳಲ್ಲಿ ತಲಾ 1.44 ಕೋಟಿ ವ್ಯಯಿಸಲಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಕಾಮಗಾರಿ ಗಳು ನಡೆದ ಮೇಲೆ ಎಲ್ಲ ರಸ್ತೆಗಳು ಸುಸ್ಥಿತಿಯಲ್ಲಿ ಇರಬೇಕಿತ್ತು. ಆದರೆ, ವಾಸ್ತವ ವಾಗಿ ರಸ್ತೆಗಳೆಲ್ಲ ಗುಂಡಿಮಯವಾಗಿವೆ. ರಸ್ತೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದವರು, ಮೂರು ವರ್ಷಗಳವರೆಗೆ ಆ ರಸ್ತೆಯ ನಿರ್ವಹಣೆ ಹೊಣೆಯನ್ನೂ ನೋಡಿ ಕೊಳ್ಳಬೇಕು ಎಂಬ ನಿಯಮವಿದೆ.
ಆದರೆ ಯಾವೊಬ್ಬ ಗುತ್ತಿಗೆದಾರರೂ ತಮಗೆ ಬರಬೇಕಿರುವ ಬಿಲ್ ಬಂದ ನಂತರ ರಸ್ತೆಯತ್ತ ವಾಪಸ್ ನೋಡುವುದೂ ಇಲ್ಲ. ಗುತ್ತಿಗೆದಾರರಿಂದ ರಸ್ತೆ ಗಳ ನಿರ್ವಹಣೆ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಪಾಲಿಕೆ ಎಂಜಿನಿಯರ್‌ಗಳ ಜವಾಬ್ದಾರಿ. ಆದರೆ ಅಧಿಕಾರಿಗಳೂ ಗುತ್ತಿಗೆದಾರರನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ.
ಬೆಂಗಳೂರಿನ ಜನರ ಸಮಯವೆಲ್ಲವೂ ರಸ್ತೆಗಳ ಕಳೆದುಹೋಗುವಂತಾಗಿದೆ. ಆದ್ದರಿಂದ ರಸ್ತೆಗಳ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿಯ ನಿರ್ಲಕ್ಷ್ಯ ಕೊನೆಯಾಗ ಬೇಕು. ರಸ್ತೆಗಳ ದುಃಸ್ಥಿತಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಬಿಬಿಎಂಪಿ ಯಿಂದ ಇನ್ನಾದರೂ ಆಗಬೇಕು