Friday, 13th December 2024

ಕಾವೇರಿ: ಸಂಕಷ್ಟ ಸೂತ್ರ ಅಗತ್ಯ

ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದು, ಸರಿಯಾಗಿ ಮಳೆಯಾಗದ ಕಾರಣದಿಂದ ಜಲಾಶಯಗಳಲ್ಲಿ ನೀರಿಲ್ಲ. ಕಾವೇರಿ ಹಾಗೂ ಕೃಷ್ಣಾ ಕಣಿವೆಯಲ್ಲಿ ಭಾರಿ ನೀರಿನ ಕೊರತೆ ಕಾಣಿಸಿಕೊಂಡಿದ್ದು, ಹೀಗಾಗಿ ತಮಿಳು ನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಪ್ರಮಾಣಪತ್ರ ಸಲ್ಲಿಸಿತ್ತು. ಆದರೂ ಇಂತಹ ಸಂದರ್ಭದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶದಂತೆಯೇ ತಮಿಳುನಾಡಿಗೆ ಪ್ರತಿದಿನ ೫ ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ರಾಜ್ಯಕ್ಕೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಗುರುವಾರ ನಿರ್ದೇಶನ ನೀಡಿದ್ದು, ಕರ್ನಾಟಕ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ಈ ಹಿಂದೆ ತಮಿಳುನಾಡು ಸರಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದಾಗಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಈಗ ಸುಪ್ರೀಂ ಕೋರ್ಟ್ ಕೂಡ ತಮಿಳುನಾಡಿನ ಪರ ಆದೇಶ ನೀಡಿದೆ.

ಜತೆಗೆ ಉಭಯ ರಾಜ್ಯಗಳ ರೈತರು ತಮ್ಮ ವಾದವನ್ನೂ ಆಲಿಸಲು ಕೋರಿದ್ದ ಅರ್ಜಿಯನ್ನು ಪುರಸ್ಕರಿಸಲೂ ಪೀಠ ನಿರಾಕರಿಸಿದ್ದು ನಿಜಕ್ಕೂ ಬೇಸರದ ಸಂಗತಿ. ತಮಿಳು ನಾಡಿನ ಕೋರಿಕೆ ಪ್ರಕಾರ ಈಗ ನೀರು ಬಿಡುವುದು ಅಸಾಧ್ಯ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಯಾವ ರೀತಿಯ ತೀರ್ಮಾನ ಮಾಡಬೇಕು ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ಆದ್ದರಿಂದ ಸರಕಾರ ನ್ಯಾಯಾಲಯಕ್ಕೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮ ನವಿ ಸಲ್ಲಿಸಬೇಕು.

ಆಡಳಿತ ಪಕ್ಷ, ಪ್ರತಿಪಕ್ಷಗಳು, ಸಂಸದರು, ಶಾಸಕರು ಪಕ್ಷಬೇಧ ಮರೆತು ಸರಕಾರಕ್ಕೆ ಬೆಂಬಲ ನೀಡಬೇಕು. ಅದೆಲ್ಲಕ್ಕಿಂತ ಮುಖ್ಯ ವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರು ಹಂಚಿಕೆ ಸಂಬಂಧ ವಾಗಿ ಬರಗಾಲದ ವರ್ಷಗಳಿಗೆ ಅನ್ವಯವಾಗುವಂತೆ ಸಂಕಷ್ಟ ಸೂತ್ರವನ್ನು ವಸ್ತುನಿಷ್ಠ ನೆಲೆಯಲ್ಲಿ ಮಾಡಬೇಕು. ಇದೊಂದೇ ನಿಜವಾದ ಪರಿಹಾರ. ಹೀಗಾಗಿ ಎರಡೂ ರಾಜ್ಯಗಳ ತಜ್ಞರು ಸೇರಿಕೊಂಡು ಪರಿಹಾರ ಕಂಡು ಕೊಳ್ಳುವ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಯಿಸಿ ಮಾತನಾಡ ಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರವೊಂದನ್ನು ಸೂಚಿಸಬೇಕು.