ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂ ಧರ್ಮ ಹಾಗೂ ಹಿಂದೂಗಳ ವಿರುದ್ಧ ಮಾತ ನಾಡಿ ಗೊಂದಲ ಸೃಷ್ಟಿಸುವುದು ಮೊದಲಿನಿಂದಲೂ ದೇಶ, ರಾಜ್ಯದಲ್ಲಿ ನಡೆದೇ ಇದೆ. ಕಳೆದ ವಿಧಾನಸಭೆ ಚುನಾವಣೆ ವೇಳೆಯೂ ಟಿಪ್ಪು ಜಯಂತಿ, ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮದ ಕುರಿತು ಭಾರೀ ಚರ್ಚೆಯಾಗಿತ್ತು.
ಆ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಎಲ್ಲ ಪಕ್ಷಗಳೂ ಪ್ರಯತ್ನಿಸಿದ್ದವು. ಆ ಸಾಲಿನಲ್ಲಿ ಈಗ ಶಾಸಕ ಸತೀಶ್ ಜಾರಕಿಹೊಳಿ ಅವರು ‘ಹಿಂದೂ’ ಪದದ ಕುರಿತು ನೀಡಿರುವ ಹೇಳಿಕೆಯೂ ಸೇರಿದೆ. ಒಂದು ಧರ್ಮದ ಇತಿಹಾಸ, ಸಂಸ್ಕೃತಿಯ ಕುರಿತು ಹೀಯಾಳಿಸುವುದು ಅಕ್ಷಮ್ಯ. ಯಾವುದೋ ಒಂದು ಧರ್ಮವನ್ನು ಹೀಯಾಳಿಸಿದರೆ ಇನ್ಯಾವುದೋ ಧರ್ಮದ ಜನರು ಮತ ಹಾಕುತ್ತಾರೆ ಎಂಬ ಭ್ರಮೆಯಿಂದ ರಾಜಕಾರಣಿ ಗಳು ಮೊದಲು ಹೊರಬರಬೇಕು.
ಯಾವುದೋ ಒಂದು ಪುಸ್ತಕದಲ್ಲಿ ಪ್ರಕಟಗೊಂಡಿದ್ದನ್ನೇ ಓದಿ, ಅದೇ ಸತ್ಯವೆಂದು ನಂಬಿ ಜನರ ಮುಂದೆ ಹೇಳುವುದು ಜವಾಬ್ದಾರಿಯುತ ಜನಪ್ರತಿನಿಽಯ ಲಕ್ಷಣವಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷದಂತಹ ಮಹತ್ವದ ಹುದ್ದೆಯಲ್ಲಿರುವ ಸತೀಶ್ ಜಾರಕಿಹೊಳಿ ಅವರು ತಾವು ಹೇಳಿಕೆ ಕೊಡುವುದಕ್ಕೂ ಮುನ್ನ ನೂರು ಬಾರಿ ಯೋಚಿಸಬೇಕಿತ್ತು. ಆದರೆ ಅವರು ತಮ್ಮ ಜವಾಬ್ದಾರಿಯನ್ನು ಮರೆತಂತಿದೆ.
ಧರ್ಮ, ಜಾತಿ ವಿಚಾರವಾಗಿ ಈಗ ಹಾರಾಟ ಕೂಗಾಟ ಮಾಡುತ್ತಿರುವ ರಾಜ್ಯದ ಮೂರೂ ಪಕ್ಷಗಳೂ ಒಂದಲ್ಲ ಒಂದು ಸಂದರ್ಭ ದಲ್ಲಿ ಅಧಿಕಾರ ನಡೆಸಿದವರೇ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಅವರ‍್ಯಾರೂ ತಮ್ಮ ಅಧಿಕಾರಾವಧಿಯಲ್ಲಿ ನಡೆದ ಪ್ರಗತಿಯ ವಿಷಯಗಳ ಕುರಿತು ಮಾತನಾಡಿ, ಜನರ ಬಳಿ ಮತ ಕೇಳುವ ಗೋಜಿಗೆ ಹೋಗುವುದಿಲ್ಲ. ಏಕೆಂದರೆ ವಾಸ್ತವ ವಾಗಿ ಎಲ್ಲರೂ ಅಧಿಕಾರವಿದ್ದ ಸಂದರ್ಭದಲ್ಲಿ ಉಂಡು ತೇಗಿದವರೇ. ಆ ಕಾರಣದಿಂದಲೇ ಮೂರೂ ಪಕ್ಷಗಳ ಮುಖಂಡರು ಜಾತಿ, ಧರ್ಮ ಎಂದು ಹುಯಿಲೆಬ್ಬಿಸಿ ಜನರ ಬಳಿ ಹೋಗುತ್ತಾರೆ.
ಯಾವುದೇ ರಾಜಕೀಯ ನಾಯಕರು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಧರ್ಮದವರ ಭಾವನೆಗಳಿಗೆ, ವಿಚಾರ, ಪರಂಪರೆ ಗಳಿಗೆ ಧಕ್ಕೆಯಾಗುವಂತೆ, ಮನಸ್ಸಿಗೆ ಘಾಸಿಯಾಗುವಂತೆ ಹೇಳಿಕೆ ನೀಡುವುದಕ್ಕೆ ಕಡಿವಾಣ ಹಾಕಬೇಕಿದೆ. ಅಭಿವೃದ್ಧಿ ವಿಚಾರದ ಕುರಿತು ಮಾತ್ರ ಮಾತನಾಡುವ ಪ್ರವೃತ್ತಿ ಬೆಳೆಸಬೇಕಿದೆ.