Friday, 13th December 2024

ಸುಗೀವಾಜ್ಞೆ ; ‘ವಿಧೇಯ’ ಮಾರ್ಗವಲ್ಲ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗಕ್ಕೆ ತನ್ನದೇ ಆದ ಗೌರವ ಹಾಗೂ ಮಹತ್ವವಿದೆ. ದೇಶ ಅಥವಾ ರಾಜ್ಯದಲ್ಲಿ ಯಾವುದೇ
ಶಾಸನ ರಚನೆಯಾಗಬೇಕಾದರೂ, ಶಾಸನ ಸಭೆಯ ಒಪ್ಪಿಗೆ ಅನಿವಾರ್ಯ.

ಆಡಳಿತ ಪಕ್ಷಗಳು ತರುವ ಹಲವು ಕಾಯಿದೆಗಳಿಗೆ ಪ್ರತಿಪಕ್ಷಗಳು ವಿರೋಧಿಸುವುದು ಸಹಜ. ಅದನ್ನು ಮೀರಿ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಕಾಯಿದೆಗಳನ್ನು ಜಾರಿಗೊಳಿಸಬೇಕು. ಆದರೆ ಕೆಲ ತಿಂಗಳಿನಿಂದ ಈಚೆಗೆ ಬಿಜೆಪಿ ಸರಕಾರ, ಪ್ರಮುಖ ಹಾಗೂ ವಿವಾದಾತ್ಮಕ ವಿಧೇಯಕಗಳನ್ನು ಎಲ್ಲ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಶುರು ಮಾಡಿದೆ. ಈ ರೀತಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ.

ಆದರೆ ಅದನ್ನೇ ಬಳಸಿಕೊಂಡು, ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ಕಾಯಿದೆಗಳನ್ನು ಜಾರಿಗೊಳಿಸುವುದು ಒಳ್ಳೆಯ ಸಂಪ್ರದಾಯವಲ್ಲ ಕರೋನಾ ಲಾಕ್‌ಡೌನ್ ನೆಪದಲ್ಲಿ ಎಪಿಎಂಪಿ, ಭೂ ಸುಧಾರಣಾ ಕಾಯಿದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದ ಬಿಜೆಪಿ ಸರಕಾರ, ಇದೀಗ ಗೋಹತ್ಯೆ ನಿಷೇಧ ಕಾಯಿದೆಯ ವಿಚಾರದಲ್ಲೂ ಇದೇ ಮಾರ್ಗ ಅನುಸರಿಸಿದೆ.

ಇದರಿಂದ ಈ ಕಾಯಿದೆಯ ಸಾಧಕ-ಬಾಧಕದ ಬಗ್ಗೆ ಚರ್ಚೆಗೆ ಅವಕಾಶಗಳೇ ಇರುವುದಿಲ್ಲ. ಇದರೊಂದಿಗೆ ಇಲ್ಲಿ ಮತ್ತೊಂದು ಮಹತ್ವದ ಸಂಗತಿಯಿದೆ. ಅದೇನೆಂದರೆ, ಅಧಿವೇಶನಗಳು ನಡೆದರೂ ಬಹುತೇಕ ಜನಪ್ರತಿನಿಧಿಗಳು ಭಾಗವಹಿಸುವುದಿಲ್ಲ. ಆದ್ದರಿಂದ ವಿಧೇಯಕಗಳು ಚರ್ಚೆಯಾಗದೇ, ಅನುಮೋದನೆಯಾಗುತ್ತಿರುವುದನ್ನು ನೋಡಿದ್ದೇವೆ. ಈ ರೀತಿ ಪಾಸ್ ಆದ
ವಿಧೇಯಕದ ಬಗ್ಗೆ ಮುಂದೊಂದು ದಿನ ವಿಷಾದ, ಪ್ರತಿಭಟನೆ ನಡೆಸುವ ಬದಲು, ಶಾಸನ ಸಭೆಯಲ್ಲಿಯೇ ಚರ್ಚಿಸಬಹುದು. ಆಡಳಿತ ನಡೆಸುವ ಸರಕಾರಗಳು, ಯಾವುದೇ ವಿಧೇಯಕ ಜಾರಿಗೊಳಿಸಲು ಮುಂದಾದರೂ, ಅದರ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು.

ಉದಾಹರಣೆಗೆ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕವನ್ನು ಮಂಡಿಸಿದ ಸರಕಾರ, ಮುಂದಿನ 20  ನಿಮಿಷ ದಲ್ಲಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅನುಮೋದನೆ ಪಡೆಯಿತು. ಈ ರೀತಿ ಚರ್ಚೆ ಇಲ್ಲದೇ ಅನುಮೋದನೆ ಪಡೆಯುವ ಸಂಸ್ಕೃತಿ ಒಳೆಯದಲ್ಲ. ಈ ನಿಟ್ಟಿನಲ್ಲಿ ಆಡಳಿತ ನಡೆಸುವವರು ಗಂಭೀರ ಚಿಂತನೆ ನಡೆಸಬೇಕಿದೆ.