Friday, 13th December 2024

ಶಿಕ್ಷಣ ತಾಣಗಳಲ್ಲಿನ ಶಿಕ್ಷೆಯ ಪರಿ ಬದಲಾಗಲಿ

ಶಾಲೆಯಿಂದ ಅಮಾನತುಗೊಳಿಸಿದ್ದಕ್ಕೆ ಮನನೊಂದು ಕೊಡಗು ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ನಿರ್ಧಾರ ಘೋಷಿಸಿದೆ. ಪ್ರಾಂಶುಪಾಲ, ವಾರ್ಡನ್ ಮತ್ತು ನಿರ್ದೇಶಕರ ಪರ ಪೊಲೀಸರು ಸಲ್ಲಿಸಿದ್ದ ಬಿ.ರಿಪೋರ್ಟ್ ತಿರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಲಾಗಿದೆ.

ಇದರ ಜತೆಗೆ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯ ಗಮನಾರ್ಹವಾದುದು. ಈ ರೀತಿಯ ಪ್ರಕರಣವು ನಕಾರಾತ್ಮಕ ಸ್ವ-ಮೌಲ್ಯಮಾಪನಕ್ಕೆ ಕಾರಣ ವಾಗುತ್ತದೆ ಎಂದು ನ್ಯಾಯಾಽಶರು ಗಮನ ಸೆಳೆದಿರುವುದು ಅತ್ಯಂತ ಮಹತ್ವಪೂರ್ಣ. ಏಕೆಂದರೆ ಶಾಲೆ-ಶಿಕ್ಷಕರು-ವಿದ್ಯಾರ್ಥಿಗಳು-ಪೋಷಕರ ಸಂಬಂಧ ಈಗ ಹಿಂದಿನಂತಿಲ್ಲ. ಮೊದಲೆಲ್ಲ ಶಿಕ್ಷಕರು ಹೇಳಿದ್ದೇ ವೇದವಾಕ್ಯ ಎಂಬಂತಿತ್ತು. ಅದನ್ನು ಪ್ರಶ್ನಿಸುವ ಸಾಹಸವನ್ನು ಪೋಷಕರು ಸಹ ಮಾಡುತ್ತಿರಲಿಲ್ಲ.

ಶಿಕ್ಷಕರಿಂದ ತಮ್ಮ ಮಗು ಶಿಕ್ಷೆಗೆ ಒಳಗಾಗಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದ ಪೋಷಕರು, ಮೇಲಿಂದ ತಾವೂ ಶಿಕ್ಷೆ ನೀಡಿ, ಶಾಲೆಯ ವರೆಗೆ ಹೋಗಿ ತಮ್ಮ ಮಗುವನ್ನು ಮುಲಾಜಿಲ್ಲದೇ ತಿದ್ದಿ ಎಂದು ಹೇಳಿ ಬರುತ್ತಿದ್ದ ಕಾಲವೊಂದಿತ್ತು. ಆಗೆಲ್ಲ ಇದ್ದದ್ದು ಸರಕಾರಿ ಶಾಲೆಗಳು ಮಾತ್ರ. ಮತ್ತು ಅಲ್ಲಿ ಶಿಕ್ಷಕರು ಬೋಧನೆ ಎಂಬುದನ್ನು ವ್ರತದಂತೆ ಪಾಲಿಸುತ್ತಿದ್ದರು. ಶಾಲೆಗಳಲ್ಲಿನ ಶಿಕ್ಷಣ ಶುದ್ಧ ‘ಸೇವೆ’ ಎಂಬುದಾಗಿತ್ತು. ಇದೀಗ ಶಿಕ್ಷಣ ಸಂಪೂರ್ಣ ವ್ಯಾಪಾರೀಕರಣ ಗೊಂಡಿದೆ. ಸರಕಾರಿ ಶಾಲೆಗಳಲ್ಲಿನ ಶಿಕ್ಷಣ ಶಿಕ್ಷಣವೇ ಅಲ್ಲವೆನ್ನುವ, ಅಥವಾ ಬಡವರ ಮಕ್ಕಳು ಓದುವ ತಾಣವೆಂಬ ಸ್ಥಿತಿಗೆ ವ್ಯವಸ್ಥೆ ಮುಟ್ಟಿದೆ. ಶಿಕ್ಷಕರು ಸಂಬಳ ಕ್ಕಾಗಿ ಬೆಳಗ್ಗೆ ೧೦- ಸಂಜೆ ೫ ರ ಉದ್ಯೋಗವನ್ನಷ್ಟೇ ಮಾಡುತ್ತಿದ್ದಾರೆ.

ಇಂಥ ಸನ್ನಿವೇಶದಲ್ಲಿ ಪರಸ್ಪರ ಗೌರವಾದರದ ಭಾವ ಉಳಿಯಲು ಸಾಧ್ಯವೇ ಇಲ್ಲ. ಹೀಗಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕೊಡುವ ಶಿಕ್ಷೆ ಕೇವಲ, ಶಾಲೆಗಳ ‘ಪ್ರತಿಷ್ಠೆಯ’ ಪೂರ್ವಗ್ರಹವನ್ನೇ ಹೊಂದಿರುವುದು ಸಾಮಾನ್ಯವೆನಿಸಿದೆ. ಇದರಿಂದ ಮಕ್ಕಳು ಭಾವನಾಘಾತಕ್ಕೊಳಗಾಗುತ್ತಿರುವುದು ಸಹಜ. ಈ ಹಿನ್ನೆಲೆಯಲ್ಲೇ ಶಿಕ್ಷಣ ಸಂಸ್ಥೆಗಳು, ಇಂಥ ಅತಿಯಾದ/ಕಠಿಣ ಶಿಸ್ತಿನ ವರ್ತನೆ ಬಿಡಬೇಕು, ಬೇರೆ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡು
ಕೊಳ್ಳಬೇಕು, ಈ ರೀತಿ ಮಾಡಿದರೆ ಇದರಿಂದ ಯುವ ಆತ್ಮಗಳ ಜೀವಗಳು ಉಳಿಯುತ್ತವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಶಿಕ್ಷಣ ಸಂಸ್ಥೆಗಳು ಹಳೆಯ ತತ್ವಗಳು ಈಗ ಬದಲಾಗಿವೆ ಎಂಬುದನ್ನು ಗಮನಿಸಬೇಕು, ಹಿಂದಿಲ್ ‘ರೂಲರ್’ ಬಿಟ್ಟು ಮಗುವಿಗೆ ಕಲಿಸುವುದನ್ನು ಶಿಕ್ಷಕರು ರೂಢಿಸಿ ಕೊಳ್ಳಬೇಕಿದೆ. ಮಗುವು ತೊಂದರೆ ಕೊಟ್ಟರೆ, ತಂಟೆ, ತುಂಟತನ ಮಾಡಿದರೆ ಅಮಾನತುಗೊಳಿಸುವ ಮತ್ತು ಹೊರಹಾಕುವಂಥ ಅತಿ ಶಿಸ್ತಿನ ಕ್ರಮಗಳು ಶಿಕ್ಷಣದ ಉದ್ದೇಶವನ್ನೇ ಬುಡಮೇಲು ಮಾಡೀತು. ಇಂಥ ಶಿಕ್ಷೆ ಮಗುವಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡುವುದಿಲ್ಲ. ಆದ್ದರಿಂದ, ಕಠಿಣ ಶಿಸ್ತನ್ನು ಜಾರಿಗೊಳಿಸುವ ಶಾಲೆಗಳು ಮಾದರಿ ಬದಲಾವಣೆಯ ಬಗ್ಗೆ ಯೋಚಿಸಬೇಕು ಎಂದಿರುವುದು ನೂರಕ್ಕೆ ನೂರು ಸ್ವೀಕಾರಾರ್ಹ.