ಮೂರು ವರ್ಷಗಳ ನಂತರ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕೆ ಹಲವರು ಅಪಸ್ವರ ಎತ್ತಿದ್ದಾರೆ. ಕರೋನಾದ ರೂಪಾಂತರ ತಳಿ ಒಮೈಕ್ರಾನ್ ನೆಪವೊಡ್ಡಿ ಬೆಳಗಾವಿ ಬದಲು ಬೆಂಗಳೂರಿನಲ್ಲೇ ಅಧಿವೇಶನ ನಡೆಸಬೇಕು ಎನ್ನುವುದು ಅವೈಜ್ಞಾನಿಕ ಹೇಳಿಕೆ.
ಹಾಗೆ ನೋಡಿದರೆ ಸೋಂಕಿನ ವಿಷಯದಲ್ಲಿ ಬೆಂಗಳೂರಿಗಿಂತ ಬೆಳಗಾವಿ ಸುರಕ್ಷಿತ ತಾಣವಾಗಿದೆ. ಬೆಂಗಳೂರಿಗೆ ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಜನ ಸಂಚರಿಸುತ್ತಾರೆ. ನೂರಾರು ವಿಮಾನಗಳು ಹಾರಾಟ ನಡೆಸುವ ಈ ತಾಣದಲ್ಲಿ ರೋಗ ಹರಡುವುದಿಲ್ಲವೇ? ರಾಜಕೀಯ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರನ್ನು ಒಟ್ಟಿಗೇ ಸೇರಿಸುವಾಗ ಮಾತ್ರ ನಮ್ಮ ರಾಜಕಾರಣಿಗಳಿಗೆ ಈ ವೈರಸ್ಸಿನ ಭಯ ಇರುವುದಿಲ್ಲವೇಕೆ? ಉತ್ತರ ಕರ್ನಾಟಕದ ಆಶೋತ್ತರಗಳ ಧ್ವನಿ ಯಾಗಲಿರುವ ಈ ಬಾರಿಯ ಅಧಿವೇಶನವು ಬೆಳಗಾವಿಯಲ್ಲಿ ನಡೆಯುವುದು ಈ ರೀತಿ ಅಪಸ್ವರ ಎತ್ತಿದವರಿಗೆ ಬೇಡವಾಗಿದೆ.
ರಾಜ್ಯ ಸರಕಾರವು ಇಂಥ ಅಪಸ್ವರಗಳಿಗೆ ಬೆಲೆ ಕೊಡದೇ ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕು. ಅಲ್ಲದೇ, ಈ ಬಾರಿ ಆ ಭಾಗದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಈ ಅಧಿವೇಶನ ಕಾರ್ಯ ಪ್ರವೃತ್ತವಾಗಬೇಕು. ರಾಜ್ಯದ ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷ, ವಿಧಾನ ಪರಿಷತ್ ಸಭಾಪತಿಗಳು ಆ ಭಾಗದವರೇ ಆಗಿರುವುದರಿಂದ ಈ ಅಽವೇಶನ ಮೇಲೆ ಉತ್ತರ ಕರ್ನಾಟಕದ ಜನತೆ ಬಹಳಷ್ಟು ಭರವಸೆ ಗಳನ್ನು ಇಟ್ಟಿದ್ದಾರೆ. ಆ ಭರವಸೆಗಳು ಹುಸಿಯಾಗದಂತೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಚರ್ಚೆಯಾಗಬೇಕಿದೆ.
ಪ್ರತಿ ಬಾರಿಯೂ ಬೆಳಗಾವಿ ಅಽವೇಶನದಲ್ಲಿ ಕೋಟಿ ಕೋಟಿ ರುಪಾಯಿ ವಸತಿ ವ್ಯವಸ್ಥೆಗಾಗಿ ಖರ್ಚಾಗುತ್ತಿದೆ. ಇದನ್ನು ತಪ್ಪಿಸಲು ಅಲ್ಲಿಯೇ ಶಾಸಕರ ಭವನ ನಿರ್ಮಿಸಲು ಸರಕಾರ ಇದೇ ಅಽವೇಶನದಲ್ಲಿ ನಿರ್ಧಾರ ಕೈಗೊಳ್ಳಬೇಕು. ಒಟ್ಟಾರೆ ಬೆಳಗಾವಿ ಅಽವೇಶನ ಯಶಸ್ವಿಯಾಗಬೇಕು.