Wednesday, 11th December 2024

ತೈವಾನ್ ಯುದ್ಧ ಕಾರ್ಮೋಡ ಚದುರಲಿ 

ತೈವಾನ್ ಮತ್ತೊಂದು ಉಕ್ರೇನ್ ಆಗಲಿದೆಯೇ? ಹಾಗೊಂದು ಪ್ರಶ್ನೆ ಉದ್ಭವಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದ ಜಾರಿಯಲ್ಲಿದ್ದು ಇದು ಹಲವಾರು ದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಿದೆ. ಈ ಯುದ್ಧವನ್ನು ಕೊನೆಗಾಣಿಲು ಇನ್ನೂ ಸಾಧ್ಯವಾಗಿಲ್ಲ. ಅದರ ಬೆನ್ನಲ್ಲೇ ಅಮೆರಿಕ ಮತ್ತು ಚೀನಾದ ಪ್ರತಿಷ್ಠಿಗೆ ತೈವಾನ್ ದೇಶ ಬೆಲೆ ಕಟ್ಟಬೇಕಾಗಿಬರಬಹುದು ಎನಿಸುತ್ತಿದೆ.

ತೈವಾನ್ ಮತ್ತು ಚೀನಾ ನಡುವಿನ ವಿವಾದ-ದ್ವೇಷ ಹಲವು ದಶಕಗಳಿಂದ ಜಾರಿಯಲ್ಲಿದೆ. 1949ರಲ್ಲಿ ಆಂತರಿಕ ಸಂಘರ್ಷ ದಲ್ಲಿ ಜಯಗಳಿಸಿದ ಕಮ್ಯು ನಿಸ್ಟ್ ಪಕ್ಷದ ಮಾವೋ ಜಡಾಂಗ್ ಸಂಪೂರ್ಣ ಚೀನಾವನ್ನು ವಶಪಡಿಸಿ ಕೊಂಡಾಗ, ಅಲ್ಲಿನ ಕೊಮಿಂಟಾಂಗ್ ಪಕ್ಷದ ಸದಸ್ಯರು ಅಂದಿನ ಪಾರಮೋಸಾ (ಇಂದಿನ ತೈವಾನ್)ಗೆ ಪಲಾಯನ ಮಾಡಿದರು. ಅಮೆರಿಕದ ಒತ್ತಡಕ್ಕೆ ಮಣಿದ ಅಂದಿನ ಚೀನಾ ತೈವಾನ್ ದೇಶವನ್ನು ವಶಪಡಿಸಿಕೊಳ್ಳಲ್ಲಿಲ.

ಆದರೆ ಇಂದು ಜಗತ್ತಿನಲ್ಲಿ ಪ್ರಬಲ ಮಿಲಿಟರಿ ಶಕ್ತಿಯಾಗಿರುವ ಚೀನಾ ತೈವಾನ್ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ತೈವಾನ್ ಮತ್ತು ಅಮೆರಿಕ ನಡುವಿನ ಗೆಳೆತನ. ಇದನ್ನು ಮುಂದು ವರಿಯಲು ಬಿಟ್ಟರೆ ಶತ್ರು ಮನೆಯ ಪಕ್ಕದಲ್ಲಿ ಬಂದು ಬಿಡುವ ಭಯ ಚೀನಾಕ್ಕೆ. ಇತ್ತೀಚೆಗೆ ಅಮೆರಿಕದ ಸಂಸತ್ತನ ಕೆಳಮನೆಯ ಸ್ಪೀಕರ್ ನ್ಯಾನ್ಸಿ ಪೆಲೊಸಿಯವರು ಚೀನಾದ ಎಚ್ಚರಿಕೆ ನಡುವೆಯು ತೈವಾನ್‌ಗೆ ಬೇಟಿ ನೀಡಿರುವುದು ಚೀನಾವನ್ನು ಕೆರಳಿಸಿದೆ. ಕಾರಣ ತೈವಾನ್‌ಗೆ ಯಾವುದೇ ದೇಶದ ಬೆಂಬಲ ಸಿಗದಂತೆ ಮಾಡಿ ತನ್ನ ಅಧೀನಗೊಳಿಸುವುದು ಚೀನಾದ ಮುಖ್ಯ ಉದ್ದೇಶವಾಗಿತ್ತು.

ಈ ಹಿನ್ನೆಲೆಯಲ್ಲಿ ಚೀನಾ, ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಯಾವುದೇ ಸವಾಲನ್ನು ಎದುರಿಸಲು ತಾನು ಸಿದ್ಧವೆಂದು ಅಮೆರಿಕೆಯೂ ಘೋಷಿಸಿದೆ. ಮಾತ್ರವಲ್ಲ, ತೈವಾನ್ ಗೆ ಸೇನಾ ನೆರವು ನೀಡಲು ಸಿದ್ಧ ಎಂದೂ ಅಮೆರಿಕ  ಘೋಷಿಸಿದೆ. ಹೀಗಾಗಿ ಎರಡು ಬಲಾಢ್ಯ ದೇಶಗಳ ಶಕ್ತಿ ಪ್ರದರ್ಶನಕ್ಕೆ ತೈವಾನ್ ವೇದಿಕೆಯಾಗುವ ಸಾಧ್ಯತೆಯಿದ್ದು , ಜಗತ್ತು ಮತ್ತೊಂದು ಯುದ್ದದ ಪರಿಣಾಮ ಎದುರಿಸಬೇಕಾಗಬಹುದು. ವಿಶ್ವಸಂಸ್ಥೆ ಈ ಕೊಡಲೆ ಮಧ್ಯಪ್ರವೇಶ ಮಾಡಿ ಚೀನಾ ಮತ್ತು ತೈವಾನ್ ನಡುವಿನ ಉದ್ವಗ್ನತೆಯನ್ನು ಶಮನಗೊಳಿಸುವ ಅಗತ್ಯವಿದೆ.

ಈಗಾಗಲೇ ಒಂದು ಯುದ್ಧದಿಂದ ಇಡೀ ಜಾಗತಿಕ ಅರ್ಥವ್ಯವಸ್ಥೆ ಬಳಲುತ್ತಿದ್ದು, ಇನ್ನೊಂದು ಯುದ್ಧಕ್ಕೆ ಮುನ್ನುಡಿ ಬರೆದರೆ ಅದರ ಪರಿಣಾಮ ಖಂಡಿತ ಭೂಕರವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲ ದೇಶಗಳೂ ಸಂಘಟಿತ ಪ್ರಯತ್ನ ಮಾಡಿ ಯುದ್ದವಾಗ ದಂತೆ ತಡೆಯಬೇಕಾದ ತುರ್ತು ಇದೆ.