ಕೇಂದ್ರ ಸರಕಾರ ಜಮ್ಮ-ಕಾಶ್ಮೀರವನ್ನು ವಿಭಜಿಸಿ ೩೬೫ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಕಡಿಮೆಯಾಗಿತ್ತು. ಕಣಿವೆ ರಾಜ್ಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಷ್ಟರಲ್ಲಿ ಉಗ್ರರು ಜಮ್ಮುವಿನಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ೨೦೧೯ರ ಆಗಸ್ಟ್ ನಲ್ಲಿ ವಿಶೇಷ ವಿಧಿಯನ್ನು ರದ್ದುಪಡಿಸಿದ ಬಳಿಕ ಜಮ್ಮುವಿನ ಮೇಲೆಯೇ ಉಗ್ರರು ಹೆಚ್ಚು ಬಾರಿ ದಾಳಿ ಮಾಡಿದ್ದಾರೆ. ಈ ದಾಳಿಗಳಲ್ಲಿ ೩೦ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆ.
ವಿಶೇಷವಾಗಿ ಜಮ್ಮುವಿನ ಕಥುವಾ, ಉಧಂಪುರ, ರಿಯಾಸಿ ಮತ್ತು ದೋಡಾ ಜಿಲ್ಲೆಗಳಲ್ಲಿ ಉಗ್ರರ ದುಷ್ಕೃತ್ಯ ಮುಂದುವರಿದಿದೆ. ಕಳೆದ ಜೂನ್ ೯ ರಂದು ಜಮ್ಮು ವಿಭಾಗದ ರಿಯಾಸಿ ಜಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಒಂಬತ್ತು ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಸುಮಾರು ೩೩ ಮಂದಿ ಗಾಯಗೊಂಡಿದ್ದರು. ಜುಲೈ ತಿಂಗಳಲ್ಲಿ ಉಗ್ರರು ಸರಣಿ ದಾಳಿಗಳನ್ನು ನಡೆಸುವ ಮೂಲಕ ಭಾರತಕ್ಕೆ ಸವಾಲೊಡ್ಡಿದ್ದಾರೆ.
ಸೋಮವಾರ (ಜುಲೈ ೮) ಕಥುವಾದ ಬದ್ನೋಟಾ ಗ್ರಾಮದಲ್ಲಿ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಸೈನಿಕರು ಹುತಾತ್ಮ
ರಾಗಿದ್ದಾರೆ. ಜೈಶೆ ಮೊಹಮ್ಮದ್ ಉಗ್ರ ಸಂಘಟನೆ ಬೆಂಬಲಿತ ಕಾಶ್ಮೀರ ಟೈಗರ್ಸ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ೯೦ರ ದಶಕದಲ್ಲಿ ಕಾಶ್ಮೀರ
ದಂತೆ ಜಮ್ಮುವಿನಲ್ಲೂ ಹಿಂಸೆ ನಿರಂತರವಾಗಿತ್ತು. ಆದರೆ ಸ್ಥಳಿಯ ಗುಜ್ಜರ್ ಮತ್ತು ಬಕೆರ್‌ವಾಲ್ ಸಮುದಾಯವನ್ನು ಸಂಘಟಿಸಿದ ಭಾರತೀಯ ಸೇನೆ,
‘ಆಪರೇಶನ್ ಸರ್ಪವಿನಾಶ್’ ಮೂಲಕ ಉಗ್ರರನ್ನು ಸದೆ ಬಡಿಯಲು ಸಫಲವಾಗಿತ್ತು.
ಸುಮಾರು ಎರಡು ದಶಕಗಳ ಕಾಲ ಜಮ್ಮು ಶಾಂತವಾಗಿತ್ತು. ಇತ್ತೀಚೆಗೆ ಮತ್ತೆ ಉಗ್ರರ ಪ್ರವೇಶ ಸಾಧ್ಯವಾಗಿದ್ದು ಹೇಗೆ ಎನ್ನುವುದು ಯೋಚಿಸಬೇಕಾದ ವಿಚಾರ. ಇಲ್ಲಿನ ಸೇನೆಯನ್ನು ಲಡಾಕ್ ಪ್ರದೇಶಕ್ಕೆ ಸ್ಥಳಾಂತರಿಸಿದ್ದರ ಲಾಭ ಪಡೆದ ಉಗ್ರರು ಸ್ಥಳೀಯರ ನಂಟು ಬೆಳೆಸಿ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಸಂವಹನದ ಮೂಲಕ ಯೋಜಿತ ದಾಳಿಗಳನ್ನು ಸಂಘಟಿಸುತ್ತಿದ್ದಾರೆ ಎನ್ನಲಾಗಿದೆ. ಉಗ್ರರು ಇಂಟರ್ ನೆಟ್ ಸಹಾಯವಿಲ್ಲದೆ ದಟ್ಟಾರಣ್ಯದಲ್ಲೂ
ಬಳಸಬಹುದಾದ ಆಪ್‌ಗಳು, ಚೀನಾ ನಿರ್ಮಿತ ಮೊಬೈಲ್ ಅಪ್ಲಿಕೇಶನ್ ಮತ್ತು ಸೆಲ್ ಫೋನ್‌ಗಳ ಮೂಲಕ ತಮ್ಮ ಯೋಜಿತ ದಾಳಿಯನ್ನು ನಿಖರ ವಾಗಿಸಿ ಕೊಂಡಿರುವುದು ಮತ್ತು ದುರ್ಗಮ ಪ್ರದೇಶದಲ್ಲಿ ಸುಲಭವಾಗಿ ತಪ್ಪಿಸಿಕೊಳ್ಳುತ್ತಿರುವುದು ಸೇನೆಗೆ ಸವಾಲಿನ ವಿಚಾರ.
ನಮ್ಮ ಯೋಧರು ಹಿಂದೆಯೂ ಇಂತಹ ಸವಾಲುಗಳನ್ನು ಎದುರಿಸಿ ಗೆದ್ದಿದ್ದಾರೆ. ಜಮ್ಮುವಿನಲ್ಲಿ ಉಗ್ರರ ಮೂಲೋತ್ಪಾಟನೆಗೆ ಮತ್ತೊಂದು ‘ಸರ್ಪ ವಿನಾಶ್’ ಕಾರ‍್ಯಾಚರಣೆ ಅಗತ್ಯವಿದೆ. ಈ ವಿಚಾರದಲ್ಲಿ ರಾಜಕೀಯ ಬೆರೆಸದೆ ಎಲ್ಲರೂ ನಮ್ಮ ಯೋಧರನ್ನು ಬೆಂಬಲಿಸಬೇಕಾಗಿದೆ.