Friday, 13th December 2024

ಪಠ್ಯಪುಸ್ತಕ ವಿವಾದ ಜೀವಂತವಾಗಿಡುವ ಪ್ರಯತ್ನ

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಿ, ಶಾಲೆಗಳಿಗೆ ಪರಿಷ್ಕರಣೆಗೊಂಡ ಪಠ್ಯಪುಸ್ತಕಗಳು ತಲುಪಿಸಲಾಗುತ್ತಿದ್ದರೂ ರಾಜ್ಯದಲ್ಲಿ ಈ ಕುರಿತ ವಾದ ವಿವಾದಗಳು ನಿಲ್ಲುತ್ತಿಲ್ಲ. ಸಾಹಿತಿಗಳು, ಸ್ವಾಮೀಜಿಗಳು ನಂತರ ರಾಜಕಾರಣಿಗಳು ತಂಡೋಪತಂಡ ವಾಗಿ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ತಿರುಗಿಬೀಳುತ್ತಿದ್ದಾರೆ.

ಪಠ್ಯದಲ್ಲಿ ಕೆಲವು ಹಿರಿಯ ಲೇಖಕರಿಗೆ ಸರಿಯಾದ ಪ್ರಾತಿನಿಧ್ಯ ದೊರಕಿಲ್ಲ, ಪ್ರಗತಿಪರರ, ಸರಕಾರದ ಜತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವ ವ್ಯಕ್ತಿಗಳ ಬರಹವನ್ನು ಕೈಬಿಡಲಾಗಿದೆ ಎನ್ನುವುದು ಇವರೆಲ್ಲರ ಪ್ರಮುಖ ಆರೋಪ. ಅನೇಕರು ಪ್ರಗತಿಪರರೆಂದು ಕರೆದುಕೊಳ್ಳುತ್ತಿರುವ ಬರಹಗಾರರು ಪಠ್ಯ ಹಿಂಪಡೆಯುವ ಆಂದೋಲನದಲ್ಲೂ ಭಾಗಿಯಾಗಿ ಸಿಎಂಗೆ ಪತ್ರವನ್ನೂ ಬರೆದಿದ್ದರು. ಅಂದರೆ ಪಠ್ಯಪುಸ್ತಕಗಳಲ್ಲಿ ಈ ಎಲ್ಲ ಪ್ರಗತಿಪರರ ಬರಹಗಳಿದ್ದವು ಎಂದಾಯಿತಲ್ಲವೇ? ಹೀಗಾಗಿ ಹೆಚ್ಚು ಹೆಚ್ಚು ಜನ ಕವಿಗಳು, ಸಾಹಿತಿಗಳು ತಮ್ಮ ಬರಹ ಪಠ್ಯಪುಸ್ತಕದಲ್ಲಿ ಇರುವುದುಬೇಡ ಎಂದು ಹಿಂಪಡೆದಷ್ಟೂ ಪಠ್ಯ ಪರಿಷ್ಕರಣೆಯ ಪ್ರಕ್ರಿಯೆ ನಿಷ್ಪಕ್ಷಪಾತವಾಗಿ, ಪೂರ್ವಗ್ರಹರಹಿತ ವಾಗಿ, ಜಾತಿ, ಪಕ್ಷ, ಸಿದ್ಧಾಂತಗಳ ಗೋಜಲುಗಳಿಲ್ಲದೆ ಗುಣಾತ್ಮಕವಾಗಿಯೇ ನಡೆದಿದೆ ಎಂದಾಯಿತಲ್ಲವೇ? ಯಾಕೆಂದರೆ ಈ ಪರಿಷ್ಕರಣೆಯು ಪೂರ್ವಗ್ರಹಪೀಡಿತವಾಗಿ, ನಿರ್ದಿಷ್ಟ ಸಿದ್ಧಾಂತ, ಜಾತಿಗಳ ವಿರುದ್ಧವಾಗಿ ನಡೆದಿದ್ದರೆ ಇಷ್ಟೊಂದು ಜನರು ತಮ್ಮ ಬರಹಗಳನ್ನು ಹಿಂಪಡೆಯುವುದಕ್ಕಾಗಿ ಪತ್ರವನ್ನೇ ಬರೆಯುತ್ತಿರಲಿಲ್ಲ.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಠ್ಯ ಪರಿಷ್ಕರಣೆ ನಡೆದಿರುವುದರಿಂದಲೇ ಅವರೆಲ್ಲರ ಬರಹಗಳು ಪಠ್ಯದಲ್ಲಿ ಉಳಿದಿವೆ ಯಲ್ಲವೇ? ಮತ್ತೇಕೆ ಈ ಕುರಿತ ಚರ್ಚೆ, ವಾದ, ವಿವಾದ, ಪ್ರತಿಭಟನೆ? ಪಠ್ಯಪುಸ್ತಕದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿ, ಮರು ಮುದ್ರಣ ಮಾಡಲು ಸರಕಾರ ಸಿದ್ಧವಿದೆ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದರೂ ಈ ಕುರಿತ ವಿವಾದ ತಣ್ಣಗಾಗಿಸಲು ಯಾರಿಗೂ ಇಷ್ಟವಿಲ್ಲ.

ಆಡಳಿತ ಪಕ್ಷದ ಮೇಲೆ ಏನಾದರೊಂದು ಗೂಬೆ ಕೂರಿಸಲು ಈ ಪಠ್ಯಪುಸ್ತಕ ಪರಿಷ್ಕರಣೆಯ ವಿಷಯವನ್ನೂ ಎಳೆದು ತರಲಾಗಿದೆಯೇ? ಚುನಾವಣೆಯ ಹೊಸ್ತಿಲಿನಲ್ಲಿ ಸರಕಾರಕ್ಕೆ ಕೆಟ್ಟ ಹೆಸರು ಬರಲೆಂದೇ ಈ ವಿವಾದವನ್ನು ಜೀವಂತವಾಗಿಡುವ ಪ್ರಯತ್ನ ಮಾಡಲಾಗು ತ್ತಿದೆಯೇ? ಎಂಬ ಅನುಮಾನ ಪ್ರತಿಯೊಬ್ಬರಲ್ಲೂ ಮೂಡಿದೆ. ಆದ್ದರಿಂದ ಪ್ರತಿಪಕ್ಷಗಳು ವಿನಾಕಾರಣ ಈ ವಿಷಯದ ಕುರಿತು ವಿವಾದ ಸೃಷ್ಟಿಸುವುದನ್ನು ಬಿಡಬೇಕು.