ಗಡಿ ಜಿಲ್ಲೆಗಳಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವುದಕ್ಕೆ ಪ್ರಯತ್ನ ನಡೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸರಕಾರಗಳು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರತಿ ವರ್ಷ ರಾಜ್ಯ ಸರಕಾರ ಗಡಿ ಭಾಗದ ಸರಕಾರಿ ಶಾಲೆಗಳು ಮತ್ತು ಕನ್ನಡ ಭಾಷೆ ಉಳಿಸಲು ಕೋಟ್ಯಂತರ ರು. ವ್ಯಯಿಸುತ್ತಿದ್ದರೂ ಆ ಶಾಲೆಗಳಿಗೆ ಮೂಲ ಸೌಕರ್ಯಗಳು ಸರಿಯಾಗಿ ತಲುಪುತ್ತಿಲ್ಲ.
ಕನ್ನಡ ಪುಸ್ತಕಗಳ ಸರಬರಾಜು ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರ ಲಾಭ ಪಡೆದುಕೊಳ್ಳುತ್ತಿರುವ ಆ ಭಾಗದಲ್ಲಿರುವ ಅನ್ಯ ರಾಜ್ಯಗಳ ಭಾಷೆಯವರು ಕನ್ನಡ ಶಾಲೆಗಳನ್ನು ಮುಚ್ಚಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮುಖ್ಯವಾಗಿ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ
ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಈ ಪ್ರಯತ್ನ ಹೆಚ್ಚಾಗುತ್ತಿದೆ. ಆದರೆ, ಇದನ್ನು ತಡೆಯುವ ಕೆಲಸ ಆಗುತ್ತಿಲ್ಲ ಎಂಬುದು ವರದಿಯಾಗಿದೆ. ಗಡಿಭಾಗದ ಹಳ್ಳಿಗಳ, ಶಾಲೆಗಳ ಅಭಿವೃದ್ಧಿಗಾಗಿ ಸರಕಾರ ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ.
ಅದಕ್ಕೆ ಅಧ್ಯಕ್ಷರು, ಕೆಲ ಸಿಬ್ಬಂದಿ ಕೂಡ ಇzರೆ. ಆದರೆ ಅದಕ್ಕೆ ಇಂತಹ ಹಳ್ಳಿಗಳ ಹಾಗೂ ಶಾಲೆಗಳ ಸ್ಥಿತಿಗತಿ ಕಾಣುತ್ತಿಲ್ಲ ಎಂಬ ಆರೋಪವಿದೆ. ಇಷ್ಟೆಲ್ಲ ಗಡಿಭಾಗದ ಶಾಲೆಗಳಲ್ಲಿ ನಡೆಯುತ್ತಿದ್ದರೂ ಅದಕ್ಕೂ ನನಗೂ ಏನು ಸಂಬಂಧವೇ ಇಲ್ಲ ಅನ್ನುವಂತೆ ಗಡಿ ಅಭಿವೃದ್ಧಿ ಪ್ರಾಧಿಕಾರ ನಡೆದುಕೊಳ್ಳುತ್ತಿದೆ. ಅದ್ಯಾಕೆ ಪ್ರಾಧಿಕಾರ ಇಂತಹ ಶಾಲೆಗಳ ಸುಧಾರಣೆಗೆ ಮುಂದಾಗುತ್ತಿಲ್ಲ ಎಂಬುದು ಗಡಿಭಾಗದ ಜನರ ಪ್ರಶ್ನೆಯಾಗಿದೆ. ಒಂದು ಕಡೆ ನೆರೆ ರಾಜ್ಯಗಳು ತಮ್ಮ ಶಾಲೆಗಳ
ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರೆ, ಇತ್ತ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳು ಸರಕಾರದ ಅನುದಾನದಿಂದ ವಂಚಿತವಾಗುತ್ತಿವೆ.
ಅನೇಕ ಕಡೆಗಳಲ್ಲಿ ಶಾಲಾ ಕೊಠಡಿಗಳು ಸೇರಿದಂತೆ ಮೂಲ ಸೌಕರ್ಯಗಳು ಇಲ್ಲದೆ ಕನ್ನಡ ಭಾಷೆ ಮಕ್ಕಳು ಅನಿವಾರ್ಯವಾಗಿ ಖಾಸಗಿ ಶಾಲೆಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಆದ್ದರಿಂದ ಗಡಿ ಅಭಿವೃದ್ಧಿ ಪ್ರಾಧಿಕಾರ ಕೂಡಲೇ ಗಡಿ ಭಾಗದ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅಲ್ಲಿನ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಮೂಲಕ ಮಕ್ಕಳನ್ನು ಶಾಲೆಗಳತ್ತ ಸೆಳೆಯಲು ಪ್ರಯತ್ನಿಸಬೇಕು.