ರಾಜ್ಯದಲ್ಲಿ ಮಳೆಗಾಲ ಶುರುವಾಗಿದೆ. ಕಳೆದ ಎರಡು ದಿನಗಳಲ್ಲಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಗಾಳಿ, ಮಳೆ ಜೋರಾಗಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿರುವ ಅವೈಜ್ಞಾನಿಕ ವಿದ್ಯುತ್ ಸಂಪರ್ಕಗಳು, ಟ್ರಾನ್ಸ್ ಫಾರ್ಮರ್‌ಗಳಿಂದಾಗಿ ಜೀವಹಾನಿ ಗಳಾಗುತ್ತಿರುವುದು ವರದಿಯಾಗುತ್ತಿವೆ.
ಬೆಂಗಳೂರಿನಲ್ಲೇ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಮಂದಿ ಜೀವ ಕಳೆದುಕೊಂಡಿ ದ್ದಾರೆ. ರಸ್ತೆ ಪಕ್ಕ, ರಾಜಕಾಲುವೆಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಎಂದರಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳು ಪಾದಚಾರಿಗಳ ಜೀವಕ್ಕೆ ಕಂಟಕಪ್ರಾಯ ವಾಗುತ್ತಿವೆ. ಅನೇಕ ಕಡೆ ಸಾರ್ವಜನಿಕರ ಜೀವಕ್ಕೆ ಸಂಚಕಾರ ತರಬಲ್ಲ ಸ್ಥಿತಿಯಲ್ಲಿ ನೆಲಮಟ್ಟದ ಇವುಗಳನ್ನು ಸ್ಥಾಪಿಸಲಾಗಿದೆ. ಕೆಲವೆಡೆ ಈಗಲೂ ಹಳೆಯ ಕಂಬ ಗಳ ವಿದ್ಯುತ್ ಪರಿವರ್ತಕಗಳಿದ್ದು, ಅವುಗಳಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ.
ನೆಲದ ವಿದ್ಯುತ್ ಪರಿವರ್ತಕಗಳನ್ನು ಸ್ಥಾಪಿಸಿರುವ ಅನೇಕ ಕಡೆಗಳಲ್ಲಿ, ಸುರಕ್ಷತೆಗಾಗಿ ಬೇಲಿಯನ್ನು ಕೂಡ ನಿರ್ಮಿಸಿಲ್ಲ. ವಾಹನಗಳು ಸಂಚರಿಸುವಾಗ ಇಂತಹ ವಿದ್ಯುತ್ ತಂತಿ ಸ್ಪರ್ಶಿಸುವ ಸಾಧ್ಯತೆಯೂ ಇದೆ. ಜಾಗದ ಕೊರತೆ ಇರುವಲ್ಲಿ ಕನಿಷ್ಠ ಪಕ್ಷ ಎತ್ತರದ ಸ್ಥಳದಲ್ಲಿ ಸ್ಥಾಪಿಸಿ, ಜನರಿಗೆ ತಲುಪದಂತೆಯೂ ಮಾಡಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಅಪಾಯಕಾರಿಯಾಗುವಂತಿರುವ ವಿದ್ಯುತ್ ಪರಿವರ್ತಕಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಹೈಕೋರ್ಟ್ 2021ರ ಏಪ್ರಿಲ್‌ನಲ್ಲೇ ಬೆಸ್ಕಾಂಗೆ ಸೂಚನೆ ನೀಡಿತ್ತು.
ಆದರೆ, ಇದುವರೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾದ ಹಾಗೂ ಎತ್ತರ ಹೆಚ್ಚಿಸಲಾದ ಟ್ರಾನ್ಸ್ ಫಾರ್ಮರ್‌ಗಳ ಸಂಖ್ಯೆ ಸಾವಿ ರಾರು ಇವೆ. ಬೆಸ್ಕಾಂನ ಬಹುತೇಕ ಪರಿವರ್ತಕಗಳು ಇರುವುದು ಬಿಬಿಎಂಪಿಗೆ ಸೇರಿರುವ ಜಾಗದಲ್ಲಿ. ಜನರು ಓಡಾಡುವ ಜಾಗದಲ್ಲಿ ಸುರಕ್ಷತಾ ಕ್ರಮಗಳಿಲ್ಲದೇ ಟ್ರಾನ್ಸ್ ಫಾರ್ಮರ್ ಅಳವಡಿಸಲು ಅವಕಾಶ ಕಲ್ಪಿಸುವುದರಲ್ಲಿ ಬಿಬಿಎಂಪಿಯ ಅಸಡ್ಡೆಯೂ ಇದೆ. ಇವುಗಳಿಂದ ಜನರಿಗೆ ಅಪಾಯ ಉಂಟಾಗುತ್ತದೆ ಎಂಬ ಬಗ್ಗೆ ದೂರುಗಳು ಬಂದ ಬಳಿಕವೂ ಅವುಗಳನ್ನು ಸ್ಥಳಾಂತರಿಸಲು ಬಿಬಿಎಂಪಿ ಮುತುವರ್ಜಿ
ವಹಿಸಿಲ್ಲ.
ಆದ್ದರಿಂದ ಬೆಸ್ಕಾಂ ಮತ್ತು ಬಿಬಿಎಂಪಿ ಅಧಿಕಾರಿಗಳು ಅಪಾಯದ ಸ್ಥಳಗಳಲ್ಲಿರುವ ಟ್ರಾನ್ಸ್ ಫಾರ್ಮರ್ ಮತ್ತು ವಿದ್ಯುತ್ ತಂತಿಗಳನ್ನು ತೆರವುಗೊಳಿಸಲು ಜಂಟಿ ಕಾರ್ಯಾಚರಣೆ ನಡೆಸಬೇಕಿದೆ. ಆ ಮೂಲಕ ಜನರ ಜೀವಗಳನ್ನು ಕಾಪಾಡಬೇಕಿದೆ.