ದೇಶದಲ್ಲೇ ಮೊದಲ ರಾಜ್ಯವಾಗಿ ‘ಏಕರೂಪ ನಾಗರಿಕ ಸಂಹಿತೆ’ (ಯುಸಿಸಿ)ಯನ್ನು ಜಾರಿಗೊಳಿಸಲು ಉತ್ತರಾಖಂಡವು ಮುಂದಾಗಿದೆ. ಪುಷ್ಕರ್‌ಸಿಂಗ್ ಧಾಮಿ ನೇತೃತ್ವದ ಬಿಜೆಪಿ ಸರಕಾರ ಈ ಸಂಬಂಧದ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದೆ. ಈ ಹಿಂದೆ ಕೇಂದ್ರ ಸರಕಾರವೂ ಹಲವು ಬಾರಿ ಈ ಬಗ್ಗೆ ಗಂಭೀರ ಸೂಚನೆಗಳನ್ನು ನೀಡಿದ್ದು, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಸಮಿತಿಯನ್ನೂ ರಚಿಸಲಾಗಿದೆ.
ಒಂದೊಮ್ಮೆ ದೇಶದಲ್ಲಿ ಮತ್ತೊಂದು ಅವಧಿಗೆ ಮೋದಿ ಸರಕಾರ ಅಽಕಾರಕ್ಕೆ ಬಂದಲ್ಲಿ, ದೇಶಾದ್ಯಂತ ಯುಸಿಸಿ ಜಾರಿಗೊಳಿಸುವ ಎಲ್ಲ ಸಾಧ್ಯತೆಗಳಿವೆ. ಇದೀಗ ಉತ್ತರಾಖಂಡದಲ್ಲಿ ಮಂಡಿಸಿರುವ ವಿಧೇಯಕದನ್ವಯ ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರದ ವಿಷಯಗಳಲ್ಲಿ ಧರ್ಮಗಳನ್ನು ಮೀರಿ ಎಲ್ಲ ನಾಗರಿಕರಿಗೂ ಒಂದೇ ಕಾನೂನು ಅನ್ವಯವೆಂಬುದನ್ನು ಪ್ರತಿಪಾದಿಸಲಾಗಿದೆ.
ಮಾತ್ರವಲ್ಲ, ಕೆಲ ಆಧುನಿಕರ ‘ಟ್ರೆಂಡ್’ ಆಗಿರುವ ಲಿವಿಂಗ್ ಟುಗೆದರ್‌ಗೂ ಕಾನೂನಿನ ಚೌಕಟ್ಟು ವಿಧಿಸುವ ಸಂಗತಿಗಳನ್ನು ಪ್ರತಿಪಾದಿಸಲಾಗಿದೆ. ಈ ಬಗ್ಗೆ ಚರ್ಚೆಗಳು ತೀವ್ರಗೊಂಡಿದ್ದು, ಧಾರ್ಮಿಕ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಕೂಗೆದ್ದಿದ್ದರೂ, ಸಾಮಾಜಿಕ ಸ್ವಾಸ್ಥ್ಯ ರಕ್ಷಣೆ ದೃಷ್ಟಿಯಲ್ಲಿ ಇದನ್ನು ದಿಟ್ಟಹೆಜ್ಜೆ ಎಂದೇ ಪರಿಗಣಿಸದೆ ವಿಧಿಯಿಲ್ಲ. ದೇಶದ ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣುವ ಕಾನೂನು ಅಗತ್ಯ ಎಂಬ ಕೂಗು ಬಹಳ ಹಿಂದಿನದಾಗಿದ್ದು, ಅನೇಕ ವೈಯಕ್ತಿಕ ಕಾನೂನುಗಳು, ಮಹಿಳೆಯರ ಹಕ್ಕುಗಳು, ವೈವಾಹಿಕ ನಿರ್ಬಂಧಗಳು, ಆಸ್ತಿ ಹಕ್ಕುಗಳಲ್ಲಿನ ತಾರತಮ್ಯ ವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರಕಾರ ದಿಟ್ಟಹೆಜ್ಜೆ ಇಡಲು ಇದು ಸಕಾಲ ಎಂಬ ಅಭಿಪ್ರಾಯ ದಟ್ಟವಾಗತೊಡಗಿದೆ.
ಅಂತರ್ಧರ್ಮೀಯ ವಿವಾಹ ಮುಂತಾದ ಪ್ರಗತಿಪರ ವಿಚಾರಗಳನ್ನು ಯುಸಿಸಿ ಪ್ರೋತ್ಸಾಹಿಸುವುದಿಲ್ಲ. ಹಿಂದೂ ವಿವಾಹ ಕಾಯಿದೆ ಹೊರತುಪಡಿಸಿ, ಉಳಿದ ವಿವಾಹ ಕಾಯ್ದೆಗಳಲ್ಲಿ ಗಂಡನಿಂದ ಹೆಂಡತಿಗೆ ಜೀವನಾಂಶ ಸಂಬಂಧ ಸ್ಪಷ್ಟತೆ ಇಲ್ಲ. ಯುಸಿಸಿಯ ಮೂಲಕ ಇದೆಲ್ಲದಕ್ಕೂ ಒಂದು ಸಮಾನ ಪಾತಳಿ ಕಲ್ಪಿತವಾಗಲಿದೆ. ದೇಶದ ಎಲ್ಲ ಪ್ರಜೆಗಳೂ ಒಂದೇ ಕಾನೂನಿನಡಿಯಲ್ಲಿ ಬರುವುದರಿಂದ ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸಲು ನ್ಯಾಯಾ ಲಯಗಳಿಗೆ ಸಾಧ್ಯವಾಗುತ್ತದೆ ಎಂಬುದು ಸಮರ್ಥಕರ ಅಂಬೋಣ.
ಹಾಗಾಗಿ ಉತ್ತರಾಖಂಡದಲ್ಲಿ ಜಾರಿ ಯಾದ ಕಾನೂನು ಆ ರಾಜ್ಯದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗುವುದಲ್ಲದೇ, ದೇಶಾದ್ಯಂತ ಯುಸಿಸಿ ಜಾರಿಗೆ ಮುನ್ನಡಿಯಾಗಲಿದೆ.