Saturday, 14th December 2024

ಪ್ರತಿಭಟನೆಯಲ್ಲಿ ಕೈಜೋಡಿಸಲಿ

ಕರ್ನಾಟಕವು ೪.೫ ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸಿಕೊಡುವ ಮೂಲಕ ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ರಾಜ್ಯವಾಗಿದೆ. ಆದರೆ ರಾಜ್ಯಕ್ಕೆ ವಾಪಸ್ ಸಿಗುತ್ತಿರುವುದು ೧ ರುಪಾಯಿಯಲ್ಲಿ ೩೫ ಪೈಸೆ ಮಾತ್ರ. ಇದನ್ನು ವಿರೋಧಿಸಿ ಇದೇ ೭ ರಂದು ದೆಹಲಿಯ ಜಂತರ್ ಮಂತರ್ ಮುಂದೆ ಪ್ರತಿಭಟನೆ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ೧೫ ನೇ ಹಣಕಾಸು ಆಯೋಗ ರಚನೆಯಾಗುವವರೆಗೆ ರಾಜ್ಯಕ್ಕೆ ಸಮಾಧಾನ ಪ್ರಮಾಣದ ಪಾಲು ಸಿಗುತ್ತಿತ್ತು. ಬಳಿಕ ತೆರಿಗೆ ಪಾಲು, ಕೇಂದ್ರದ ಅನುದಾನ, ಸಹಾಯಧನ ಕುಸಿಯುತ್ತಲೇ ಹೋಗಿದೆ.

೧೪ನೇ ಹಣಕಾಸು ಆಯೋಗದ ಅವಧಿಯಲ್ಲಿ ತೆರಿಗೆ ಪಾಲು ಶೇ.೧.೯೮ರಷ್ಟಿದ್ದರೆ, ೧೫ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.೧.೫ಕ್ಕೆ ಇಳಿಕೆ ಯಾಗಿದೆ. ಎರಡು ಆಯೋಗದ ಶಿಫಾರಸುಗಳ ನಡುವೆ ಕರ್ನಾಟಕವು ಕೇಂದ್ರದ ತೆರಿಗೆ ವರ್ಗಾವಣೆಯ ಪಾಲಿನಲ್ಲಿ ಶೇ.೨೪.೫ರಷ್ಟು ಕುಸಿತ ಕಂಡಿದೆ. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕಕ್ಕೆ ?೨೬,೧೪೦ ಕೋಟಿ ಕೊರತೆ ಆಗಿದೆ. ರಾಜ್ಯವಾರು ಸಂಗ್ರಹವಾಗುವ ತೆರಿಗೆ ಪಾಲಿನ ಹಂಚಿಕೆ ಮಾಡುವ ವಿಧಾನ ವನ್ನು ಕೇಂದ್ರ ಸರಕಾರ ಬದಲಾಯಿಸಿದ್ದೇ ಇದಕ್ಕೆ ಕಾರಣ.

ಹೆಚ್ಚು ತೆರಿಗೆ ಸಂಗ್ರಹವಾಗುವ ರಾಜ್ಯಕ್ಕೆ ಹೆಚ್ಚಿನ ಪಾಲನ್ನು ನೀಡುವ ಬದಲಿಗೆ ಜನಸಂಖ್ಯೆ, ಹಿಂದುಳಿದಿರುವಿಕೆ ಮತ್ತಿತರ ಮಾನದಂಡ ಆಧರಿಸಿ ತೆರಿಗೆ
ಪಾಲು ಹಂಚಿಕೆ ಮಾಡುವ ತೀರ್ಮಾನವನ್ನು ಸರಕಾರ ಕೈಗೊಂಡಿತು. ಒಟ್ಟು ಜಿಡಿಪಿಯ ಮೂರನೇ ಒಂದರಷ್ಟು ಹಾಗೂ ತೆರಿಗೆಯ ಶೇ.೩೦ರಷ್ಟು ಮೊತ್ತ
ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ದಿಂದ ಸಂಗ್ರಹವಾಗುತ್ತಿದೆ.

ಪಾಲು ನೀಡುವಾಗ, ಉತ್ತರ ಪ್ರದೇಶ, ಬಿಹಾರ ಮತ್ತಿತರ ರಾಜ್ಯಗಳಿಗೆ ಹೆಚ್ಚಿನ ಮೊತ್ತ ನೀಡಲಾಗುತ್ತಿದೆ. ಈ ತಾರತಮ್ಯದ ವಿರುದ್ಧ ಧ್ವನಿ ಎತ್ತಲು ಸರಕಾರ ಮುಂದಾಗಿದೆ. ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡುವುದನ್ನು ಬದಲಿಸಬೇಕು. ಅಭಿವೃದ್ಧಿ ಹೊಂದಿರುವ ರಾಜ್ಯಗಳನ್ನು ಪುರಸ್ಕರಿಸಿ ಹೆಚ್ಚಿನ ಪಾಲು ನೀಡಬೇಕು ಎಂಬ ವಾದನ್ನು ಕರ್ನಾ ಟಕ ಮಂಡಿಸಲಿದೆ. ಇದಕ್ಕೆ ಪಕ್ಷಾತೀತವಾಗಿ ಎಲ್ಲ ಸಂಸದರೂ ಬೆಂಬಲಿಸಬೇಕಿದೆ. ಆ ಮೂಲಕ ದೆಹಲಿ ಯಲ್ಲಿ ರಾಜ್ಯದ ಪರ ಧ್ವನಿ ಎತ್ತಬೇಕಿದೆ.