Wednesday, 18th September 2024

ವಾಲ್ಮೀಕಿ ನಿಗಮ ವಿವಾದ ಸರಿಯಾಗಿ ತನಿಖೆಯಾಗಲಿ

ವಾಲ್ಮೀಕಿ ನಿಗಮದಲ್ಲಿನ ಹಣ ದುರ್ಬಳಕೆ ಮತ್ತು ಅಧಿಕಾರಿಯೊಬ್ಬರ ಆತ್ಮಹತ್ಯೆ ಬಳಿಕ ಸಾಕಷ್ಟು ಸುದ್ದಿಯಾಗಿದ್ದು ಸಚಿವ ನಾಗೇಂದ್ರ ಅವರ ರಾಜೀ ನಾಮೆಗೂ ಪ್ರತಿಪಕ್ಷ ಬಿಜೆಪಿ ಒತ್ತಾಯಿಸುತ್ತಿದೆ. ನಿಗಮದ ಸುಮಾರು ೯೪ ಕೋಟಿ ರು. ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ಈ ಸಂಬಂಧವೇ ಅಽಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜತೆಗೆ ಸಚಿವರ ಮೌಕಿಕ ಆದೇಶ ಮತ್ತು ಕೆಲವು ಅಧಿಕಾರಿಗಳ ಹೆಸರನ್ನೂ ಅವರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ವಿವಾದ ಉಲ್ಬಣ ವಾಗಿದೆ. ಈ ಬೆಳವಣಿಗೆಗಳ ನಡುವೆಯೇ ಪೊಲೀಸರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯದ ಆರು ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ ಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಕೂಲಂಕಶವಾಗಿ ತನಿಖೆ ನಡೆಸಿ ಸತ್ಯವನ್ನು ಹೊರಗೆ ತರಬೇಕಾಗಿದೆ. ಈ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಾಕಷ್ಟು ವಾಕ್ಸಮರವೂ ನಡೆಯುತ್ತಿದೆ. ಈ ಹಿಂದೆ ಕೆ.ಎಸ್.ಈಶ್ವರಪ್ಪ ಅವರು ಸಚಿವರಾಗಿದ್ದ ವೇಳೆ ಗುತ್ತಿಗೆ ದಾರರೊಬ್ಬರು ಹೆಸರಿಟ್ಟು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸಚಿವರ ರಾಜೀನಾಮೆ ಪಡೆಯಲಾಗಿತ್ತು. ಈಗ ಅದೇ ನಿಯಮ ಇಲ್ಲಿಯೂ ಅನ್ವಯ ವಾಗಬೇಕಾಗಿದೆ ಎಂಬುದು ಬಿಜೆಪಿ ಆಗ್ರಹ.

ಹೀಗಾಗಿ ಯಾವುದೇ ಸಂಶಯಗಳಿಗೆ ದಾರಿಯಾಗದಂತೆ ತನಿಖೆ ನಡೆಸಿ ಸತ್ಯಾಂಶ ಕಂಡುಕೊಳ್ಳಬೇಕಾಗಿದೆ. ಯಾವುದೇ ಕಾರಣಕ್ಕೂ ಸರಕಾರದ ಹಣವನ್ನು ಈ ರೀತಿ ದುರ್ಬಳಕೆ ಮಾಡುವುದು ಸಲ್ಲದು. ಸರಕಾರದ ಹಣ ಜನರದ್ದಾಗಿದ್ದು ಇದು ಸದ್ಬಳಕೆಯಾಗಬೇಕೇ ವಿನಃ ಅಧಿಕಾರಿಗಳ ನಡುವಿನ ಓಡಾಟಕ್ಕೆ ಬಳಕೆಯಾಗಬಾರದು. ಇಡೀ ಪ್ರಕರಣದಲ್ಲಿ ಅಧಿಕಾರಿಗಳು ಕಾನೂನು ಮೀರಿರುವುದು ಚಂದ್ರಶೇಖರ್ ಆತ್ಮಹತ್ಯೆ ಪತ್ರದಿಂದ ಗೊತ್ತಾಗುತ್ತದೆ. ಇತ್ತ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತನಿಖೆ ನಡೆಸುವವರ್ಯಾರು ಎಂಬ ಬಗ್ಗೆಯೂ ವಾಕ್ಸಮರ ನಡೆದಿದ್ದು ಬಿಜೆಪಿ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸುತ್ತಿದೆ.

ಅಲ್ಲದೆ, ಈ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸಿಕೊಳ್ಳಲಾಗಿತ್ತು ಎಂಬ ಗಂಭೀರ ಆರೋಪವನ್ನೂ ಮಾಡಿದೆ. ಆದರೆ, ಕಾಂಗ್ರೆಸ್ ಸಿಬಿಐಗೆ ನೀಡಲು
ಒಪ್ಪುತ್ತಿಲ್ಲ. ರಾಜ್ಯದ ತನಿಖಾ ತಂಡಗಳೇ ತನಿಖೆ ನಡೆಸಲಿವೆ ಎಂದಿದೆ. ಆದರೆ, ಈ ವಿಚಾರದಲ್ಲಿ ತನಿಖಾ ತಂಡಗಳ ಬಗ್ಗೆ ಜಗಳವಾಡುವುದನ್ನು ಬಿಟ್ಟು ತಪ್ಪಿಸತ್ಥರು ಯಾರು ಎಂಬುದನ್ನು ಕಂಡುಕೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *