ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವುದಕ್ಕೂಮುನ್ನವೇ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿರುವ ಸಚಿವರು ಮತ್ತು ಶಾಸಕರು ಅನುಕೂಲಕಾರಿ ಪಕ್ಷಗಳತ್ತ ಜಿಗಿ-ನೆಗೆದಾಟ ಆರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ ಟಿಕೆಟ್ ಗಳು ಘೋಷಣೆಯಾಗುತ್ತಿದ್ದಂತೆ ಈ ಜಿಗಿತದ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಪಕ್ಷದ ಸೈದ್ಧಾಂತಿಕ ಅಭಿಪ್ರಾಯವನ್ನು ಒಪ್ಪಿ, ಆ ಪಕ್ಷದಲ್ಲಿ ಹತ್ತಾರು ವರ್ಷ ಕೆಲಸ ಮಾಡಿದವರೂ ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ, ಅಥವಾ ಈ ಬಾರಿ ಇಂತಹ ಪಕ್ಷದಿಂದ ಸ್ಪರ್ಧಿಸಿದರೆ ಗೆಲ್ಲುವುದು ಕಷ್ಟ ಎಂಬುದು ಗೊತ್ತಾಗುತ್ತಿದ್ದಂತೆ ಪಕ್ಷಾಂತರ ಮಾಡು ತ್ತಿದ್ದಾರೆ. ಹಾಗಾದರೆ ಇಷ್ಟು ದಿನ ಇದ್ದ ಸೈದ್ಧಾಂತಿಕ ಬದ್ಧತೆ ಎಲ್ಲಿ ಹೋಯಿತು? ಇವರಿಗೆಲ್ಲ ಅಧಿಕಾರದಲ್ಲಿದ್ದರೆ ಮಾತ್ರ ರಾಜಕೀಯ ಮತ್ತು ಸಾಮಾಜಿಕ ಜೀವನ ತೃಪ್ತಿ ತರುತ್ತದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪಕ್ಷಾಂತರ ಪರ್ವ ಇಲ್ಲಿಗೇ ಮುಗಿಯುವುದಿಲ್ಲ.
ಚುನಾವಣೆ ನಡೆದು, ಯಾವುದೇ ಪಕ್ಷಗಳಿಗೆ ಸ್ಪಷ್ಟ ಬಹುಮತ ದೊರೆಯದಿದ್ದರೆ ಪಕ್ಷಾಂತರದ ಭರಾಟೆ ಇನ್ನೂ ಹೆಚ್ಚಾಗುತ್ತದೆ. ಪ್ರತಿಯೊಂದು ರಾಜಕೀಯ ಪಕ್ಷವೂ ಪಕ್ಷಾಂತರದ ಲಾಭ ಪಡೆಯಲು ಹವಣಿಸುತ್ತವೆ. ಅಧಿಕಾರದ ಗದ್ದುಗೆ ಏರಬೇಕು ಎಂಬ ಕಾರಣದಿಂದ ಎಲ್ಲ ಪಕ್ಷದವರೂ ಕುದುರೆ ವ್ಯಾಪಾರ ಮಾಡಿದ್ದನ್ನು ಈ ಹಿಂದೆ ನೋಡಿದ್ದೇವೆ. ತೋಳ್ಬಲ, ಹಣ ಬಲ, ಜಾತಿ ಬಲದ ಆಧಾರದ ಮೇಲೆ ನಡೆಯುವ ಪಕ್ಷಾಂತರ, ಪ್ರಜಾತಂತ್ರ ವ್ಯವಸ್ಥೆಯನ್ನೇ ಸಂಪೂರ್ಣ ಬುಡಮೇಲು ಮಾಡುವ ಅಪಾಯದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಯಾವ ಪಕ್ಷವೂ ಪಕ್ಷಾಂತರದ ಕಳಂಕದಿಂದ ಹೊರ ತಾಗಿಲ್ಲ.
ಪಕ್ಷಾಂತರದಿಂದ ಆಗುವ ಇನ್ನೊಂದು ದೊಡ್ಡ ಅಪಾಯವೆಂದರೆ, ಈಗಾಗಲೇ ಒಂದು ಪಕ್ಷದಿಂದ ಗುರುತಿಸಿಕೊಂಡು, ಹತ್ತಾರು ವರ್ಷ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿರುವ ಅಭ್ಯರ್ಥಿಗಳ ಬದಲು ಬೇರೆ ಪಕ್ಷಗಳಿಂದ ಬಂದ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ತನ್ನ ಪಕ್ಷದ ನಿಷ್ಠಾವಂತ ಕಾರ್ಯಕರ್ತನಗೇ ಅನ್ಯಾಯ ಮಾಡಲಾಗುತ್ತದೆ. ಈ ಹಿಂದೆ ಹಲವಾರು ಕ್ಷೇತ್ರಗಳಲ್ಲಿ ಈ ರೀತಿ ಆಗಿದ್ದನ್ನು ನೋಡಿದ್ದೇವೆ. ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಮಾನವೇ ಅಂತಿಮ. ಪಕ್ಷಾಂತರಿಗಳನ್ನು ಮರು ಆಯ್ಕೆ ಮಾಡುವ ಕುರಿತು ಮತದಾರರು ಚಿಂತಿಸುವ ಅಗತ್ಯ ಇದೆ.