Saturday, 14th December 2024

ಲಕ್ಷ ದಾಟಿದ ಸೋಂಕು ಲಕ್ಷ್ಯ ವಹಿಸಬೇಕಿದೆ ರಾಜ್ಯ

ದೇಶದಲ್ಲಿ ಕರೋನಾ ಸೋಂಕಿನ ಹರಡುವಿಕೆ ಎರಡನೆ ಅಲೆಯು ಈಗಾಗಲೇ ಲಕ್ಷವನ್ನು ದಾಟಿದೆ. ದಿನೇ ದಿನೇ ವೇಗವಾಗಿ
ಹರಡುತ್ತಿರುವ ಸೋಂಕು ತೀವ್ರತರ ಪರಿಣಾಮ ಬೀರುವುದಿಲ್ಲ ಎಂದು ಅಂದಾಜಿಸಲಾಗಿತ್ತು.

ಆದರೆ ಇದೀಗ ಸಾವಿನ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬರುತ್ತಿದೆ. ಮಹಾರಾಷ್ಟ್ರ, ಛತ್ತೀಸ್‌ಗಢ ಹಾಗೂ ಪಂಜಾಬ್ ರಾಜ್ಯಗಳ
ಬಗ್ಗೆ ಕೇಂದ್ರ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ ಮಂಗಳವಾರದಂದು ರಾಜ್ಯದಲ್ಲಿ ಒಂದೇ ದಿನ 6150 ಪ್ರಕರಣ ಪತ್ತೆ
ಯಾಗಿದ್ದು, 39 ಸಾವು ಸಂಭವಿಸಿದೆ. ಈ ಬೆಳವಣಿಗೆಯಿಂದಾಗಿ ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕಾಗಿ ಮತ್ತಷ್ಟು ಜಾಗ್ರತೆ ವಹಿಸಬೇಕಿರುವ ಅನಿವಾರ್ಯ ಸ್ಥಿತಿ ನಿರ್ಮಾಣಗೊಂಡಿದೆ.

ಕರೋನಾ ನಿವಾರಣೆಗೆ ಲಸಿಕೆ ಲಭ್ಯವಾಗುತ್ತಿದೆಯಾದರೂ, ಸೋಂಕು ಹರಡುವುದನ್ನು ತಡೆಯಲು ಜನರ ಸಹಭಾಗಿತ್ವ ಅಗತ್ಯ ಎಂದು ಸರಕಾರ ಕೋರಿದೆ. ಆದರೂ ಎಲ್ಲೆಡೆ ಜನದಟ್ಟಣೆ ಕಂಡುಬರುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ನಿಯಮ ಪಾಲಿಸದವರಿಗೆ ದಂಡ ವಿಧಿಸಲು ಬಿಬಿಎಂಪಿ ಎರಡು ಸಾವಿರ ಹೋಂಗಾರ್ಡ್ಸ್‌ಗಳನ್ನು ನಿಯೋಜಿಸಿಕೊಳ್ಳುತ್ತಿದೆ.

ಕೇವಲ ದಂಡದ ಮೂಲಕ ನಿಯಂತ್ರಣ ಸಾಧ್ಯವೇ ಎಂಬುದು ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ಸಂಗತಿ. ಸೋಂಕಿನ ಹರಡುವಿಕೆ ಹೀಗೆ ಮುಂದುವರಿದರೆ ಲಾಕ್‌ಡೌನ್ ಅನಿವಾರ್ಯ ಎಂಬುದಾಗಿ ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ. ಅನಾಹುತ ಸಂಭವಿ ಸಿದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಮೊದಲೇ ಜಾಗ್ರತೆವಹಿಸುವುದು ಒಳ್ಳೆಯ ಬೆಳವಣಿಗೆ. ಇದೀಗ ಸೋಂಕಿನ ಏರಿಕೆ ಯಿಂದಾಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆ ಹಾಗೂ ಆಮ್ಲಜನಕದ ಅಗತ್ಯತೆಯೂ ಹೆಚ್ಚುತ್ತಿದೆ.

ಈ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕಿದೆ. ಜನತೆಯೂ ಸಹ ಸ್ವಯಂ ಪ್ರೇರಿತರಾಗಿ ಕರೋನಾ ನಿಯಂತ್ರಣಕ್ಕೆ ಸರಕಾರದ ಸಲಹೆಗಳನ್ನು ಪಾಲಿಸಬೇಕಿರುವುದು ಪ್ರಸ್ತುತ ಬಹುಮುಖ್ಯ.