Thursday, 12th December 2024

Vishwavani Editorial: ಶಿಸ್ತಿನ ಪಕ್ಷದಲ್ಲಿ ಅಶಿಸ್ತಿನ ತಾಂಡವ!

Waqf Controversy

ರಾಜಕೀಯ ಪಕ್ಷ ಎಂದಾಕ್ಷಣ ಕಂಡೂ ಕಾಣದಂತೆ ಅದರಲ್ಲಿ ಬಣಗಳಿರುವುದು, ಅಭಿಪ್ರಾಯಭೇದಗಳು ಹೊಗೆಯಾಡುವುದು ಸಾಮಾನ್ಯ. ಇದು ಒಂದು ಮಟ್ಟದಲ್ಲಿದ್ದರೆ ಪರವಾಗಿಲ್ಲ. ಆದರೆ ದಿನಕ್ಕೊಂದು ‘ಎಪಿಸೋಡ್’ನಂತೆ ಬಣ ಬಡಿದಾಟ ನಡೆಯುತ್ತ ಭಿನ್ನಮತ ತಾರಕಕ್ಕೇರುತ್ತಿದ್ದರೆ ಅದು ಪಕ್ಷದ ನೆಲೆಗಟ್ಟು ಮತ್ತು ಜನರ ನಿರೀಕ್ಷೆಯ ಸೌಧ ಕುಸಿಯುವುದಕ್ಕೆ ಕಾರಣವಾಗುತ್ತದೆ.

ನಮ್ಮ ರಾಷ್ಟ್ರೀಯ ಪಕ್ಷಗಳಲ್ಲಿ ಒಂದೆನಿಸಿಕೊಂಡಿರುವ ಬಿಜೆಪಿಯ ರಾಜ್ಯ ಘಟಕದಲ್ಲಿ ಪ್ರಸ್ತುತ ತಲೆದೋರಿರುವ ‘ಬಣ ರಾಜಕೀಯ’ ಮತ್ತು ‘ವಾಕ್ಸಮರ’ದ ನಿದರ್ಶನಗಳನ್ನು ಕಂಡು ಈ ಮಾತು ಹೇಳಬೇಕಾಗಿ ಬಂದಿದೆ. ‘ಶಿಸ್ತಿನ ಪಕ್ಷ’, ‘ಪಾರ್ಟಿ ವಿತ್ ಎ ಡಿಫರೆನ್ಸ್’ ಎಂದೆಲ್ಲಾ ಒಂದು ಕಾಲಕ್ಕೆ ಕರೆಯಿಸಿಕೊಳ್ಳುತ್ತಿದ್ದ ಹೆಗ್ಗಳಿಕೆ ಬಿಜೆಪಿಗಿತ್ತು. ಆದರೀಗ ಸದರಿ ಕೇಸರಿಪಕ್ಷವನ್ನು ಹಾಗೆ ಕರೆಯುವಂಥ ವಾತಾವರಣವಿಲ್ಲ ಎನ್ನಬಹು ದೇನೋ? ನಿರ್ದಿಷ್ಟವಾಗಿ ಪಕ್ಷದ ರಾಜ್ಯಘಟಕವಂತೂ ‘ಕದಡಿದ ನೀರು’ ಆಗಿಬಿಟ್ಟಿದೆ.

ವಕ್ಫ್ ಮಂಡಳಿ ಹುಟ್ಟುಹಾಕಿರುವ ಗೊಂದಲದ ವಿರುದ್ಧ ಹೋರಾಡುವ ವಿಷಯವೇ ಇರಲಿ, ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರವೇ ಆಗಿರಲಿ, ಬಿಜೆಪಿ ಎಂಬ ಶಿಸ್ತಿನ ಪಕ್ಷವು ಈಗ ಅಶಿಸ್ತಿನ ಮೂಟೆಯಾಗಿದೆ ಎನ್ನುತ್ತಾರೆ ಅಲ್ಲಿನ ಬೆಳವಣಿಗೆಗಳನ್ನು ಹತ್ತಿರದಿಂದ ಕಂಡವರು.

ಮೊದಲೇ ಉಲ್ಲೇಖಿಸಿದಂತೆ, ಯಾವುದೇ ಸಂಘಟನೆಯಲ್ಲಿ, ಅದರಲ್ಲೂ ಸಮಾಜದ ವಿವಿಧ ಸ್ತರಗಳು, ಜಾತಿ-ಮತಗಳನ್ನು ಪ್ರತಿನಿಧಿಸುವವರು ತುಂಬಿಕೊಂಡಿರುವ ‘ಕೂಡು-ಕುಟುಂಬ ಸದೃಶ’ ವ್ಯವಸ್ಥೆಯಲ್ಲಿ ಅಭಿಪ್ರಾಯಭೇದಗಳು ಹೊಮ್ಮುವುದು ಸಹಜ. ಆದರೆ ಅವು ಪಕ್ಷದ ಕಾರ್ಯಾ ಲಯದ ನಾಲ್ಕು ಗೋಡೆಗಳಿಂದ ಆಚೆಗೆ ಬರದಂತೆ ನೋಡಿಕೊಂಡು, ಪಕ್ಷದ ವರ್ಚಸ್ಸು ಹಾಗೂ ಅದರ ಸದಸ್ಯರ ಘನತೆಯನ್ನು ಕಾಪಿಟ್ಟುಕೊಂಡು ಬರುವುದು ಅಲ್ಲಿನ ಪ್ರತಿಯೊಬ್ಬ ಒಡನಾಡಿಯ ಹೆಗಲ ಮೇಲಿನ ನೊಗವಾಗಿರುತ್ತದೆ. ಆದರೆ ಬಿಜೆಪಿಯಲ್ಲೀಗ ಈ ಹೊಣೆಗಾರಿಕೆಯ ನಿಭಾವಣೆ ಆಗುತ್ತಿಲ್ಲ ಎಂಬುದು ಸ್ಪಷ್ಟ. ಪರಿಸ್ಥಿತಿ ಹೀಗೇ ಮುಂದುವರಿದರೆ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ‘ಕಮಲ’ ಅರಳಲು ಅನುವುಮಾಡಿಕೊಟ್ಟ ರಾಜ್ಯ ಎಂಬ ಹಣೆಪಟ್ಟಿಯ ಕರ್ನಾಟಕದಲ್ಲೇ ಪಕ್ಷದ ಅಸ್ತಿತ್ವಕ್ಕೆ ಸಂಚಕಾರ ಬರುವುದು ನಿಶ್ಚಿತ.

ಇದನ್ನೂ ಓದಿ: Vishwavani Editorial: ತಮಸೋಮಾ ಜ್ಯೋತಿರ್ಗಮಯ