Saturday, 12th October 2024

ವಿನಾಕಾರಣ ವಿವಾದ ಬೇಡ

‘ವಿವೇಕ’ ಹೆಸರಿನಲ್ಲಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಕೊಠಡಿಗಳನ್ನು ನಿರ್ಮಿಸುವ ರಾಜ್ಯ ಸರಕಾರದ ಕಾರ್ಯ ಕ್ರಮ ರಾಜಕೀಯ ವಿವಾದದ ಸ್ವರೂಪ ಪಡೆದುಕೊಂಡಿದೆ. ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ 7601 ಕೊಠಡಿಗಳಿಗೆ ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ‘ವಿವೇಕ’ ಎಂದು ಹೆಸರಿಡುವುದಾಗಿ ಸರಕಾರ ಹೇಳಿದೆ. ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ಚಿಂತನೆ ನಡೆದಿದೆ.

‘ವಿವೇಕ’ ಹೆಸರಿನ ಕೊಠಡಿಗಳ ಜತೆಗೆ, 2023ರ ಆಗ ವೇಳೆಗೆ ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶೌಚಾಲಯ ನಿರ್ಮಿಸಿಕೊಡುವುದಾಗಿ ಹಾಗೂ eನಪೀಠ ಪ್ರಶಸ್ತಿ ಪುರಸ್ಕೃತರು ಕಲಿತ ಶಾಲೆಗಳೊಂದಿಗೆ, ಶತಮಾನ ಪೂರೈಸಿರುವ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದಾಗಿ ಸರಕಾರ ಹೇಳಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ 750 ಸರಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೂ ಸರಕಾರ ಮುಂದಾಗಿದೆ.

ಕೊಠಡಿಗಳ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ವೃದ್ಧಿಗೆ ಕೈಗೊಂಡ ಕ್ರಮಗಳು ಸ್ವಾಗತಾರ್ಹ. ಆದರೆ ಪ್ರತಿಪಕ್ಷಗಳು ವಿನಾಕಾರಣ ಇದರಲ್ಲೂ ತಪ್ಪು ಹುಡುಕಲು ಪ್ರಯತ್ನಿಸುತ್ತಿವೆ. ಪ್ರತಿಪಕ್ಷಗಳು ಈ ವಿಷಯವನ್ನು ರಾಜಕೀಯ ವಿವಾದ ಮಾಡುವುದಕ್ಕಿಂತ ಮೊದಲು ರಾಜ್ಯದ ಶಾಲಾ-ಕಾಲೇಜುಗಳ ಸ್ಥಿತಿಗತಿಯನ್ನು ಮೊದಲು ತಿಳಿದುಕೊಳ್ಳಬೇಕು. ಗ್ರಾಮೀಣ ಭಾಗಗಳಷ್ಟೇ ಅಲ್ಲ, ದೊಡ್ಡ ನಗರಗಳಲ್ಲೂ ಸರಕಾರಿ ಶಾಲೆಗಳ ಸ್ಥಿತಿಗತಿ ತೀರ ಕೆಟ್ಟದಾಗಿದೆ. ಬೆರಳೆಣಿಕೆಯಷ್ಟು ಬಿಟ್ಟರೆ ಉಳಿದಂತೆ ಸರಕಾರಿ ಶಾಲೆಗಳೆಂದರೆ ಪಾಲಕರು ಮತ್ತು ಮಕ್ಕಳು ಹೆದರುವಂತಾಗಿದೆ.

ಹಲವಾರು ಶಾಲೆಗಳು ಈಗಲೋ ಆಗಲೋ ಬೀಳುವಂತಿವೆ. ರಾಜ್ಯಾದ್ಯಂತ ಏಕಕಾಲಕ್ಕೆ ಸಾವಿರಾರು ಹೊಸ ಕೊಠಡಿಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ನಿರ್ಧಾರವನ್ನು ಈ ಹಿಂದಿನ ಯಾವ ಸರಕಾರವೂ ತೆಗೆದುಕೊಂಡಿರಲಿಲ್ಲ. ಇದೊಂದು ಅಭಿವೃದ್ಧಿಪಥದಲ್ಲಿರುವ ಹೆಜ್ಜೆ ಎಂದು ಪರಿಗಣಿಸುವ ಬದಲು ವಿನಾಕಾರಣ ವಿವಾದದ ವಸ್ತುವಾಗಿಸಲು ಪ್ರಯತ್ನಿಸುತ್ತಿರುವುದು ಪ್ರತಿಪಕ್ಷಗಳ ನಾಯಕರಿಗೆ ಶೋಭೆ ತರುವಂತಹದ್ದಲ್ಲ. ಇಲ್ಲಿ ಶಾಲೆಗಳ ಗೋಡೆಗಳಿಗೆ ಉಪಯೋಗಿಸುವ ಬಣ್ಣವು ಪ್ರಧಾನ ಅಂಶವಾಗಬಾರದು. ಶಾಲೆಗಳ ಅಭಿವೃದ್ಧಿ ಎಂಬುದು ಪ್ರಧಾನ ಅಂಶವಾಗಬೇಕು.

ಮುಖ್ಯವಾಗಿ ಮಕ್ಕಳಿಗೆ ಸುಭದ್ರ, ಸುರಕ್ಷಿತ ವಾತಾವರಣದಲ್ಲಿ ಶಿಕ್ಷಣ ದೊರಕಿಸಬೇಕು. ಈ ವಿಷಯ ವಿವಾದವಾಗದಂತೆ, ಬಣ್ಣದಿಂದಾಗಿ ಮಕ್ಕಳ ಮನಸ್ಸುಗಳ ನಡುವೆ ಗೋಡೆ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು.