ಮಳೆಗಾಲ ಆರಂಭವಾಗಿದೆ. ಬೆಂಗಳೂರಿನಲ್ಲಿ ನಿತ್ಯವೂ 2-3 ಗಂಟೆ ಮಳೆಯಾಗುತ್ತಿದೆ. ಆದರೆ ಆ ಮಳೆ ನೀರೆಲ್ಲ ಕೆಂಗೇರಿಯಂತಹ
ಮೋರಿಗಳಲ್ಲಿ ಪ್ರವಾಹದ ಕೊಚ್ಚಿ ಹೋಗುತ್ತಿದೆ. ನಗರದ ಶೇ.95ರಷ್ಟು ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲುಗಳನ್ನು ಅಳವಡಿಸಿಕೊಂಡಿಲ್ಲ. ಆ ಕಾರಣ ದಿಂದಲೇ ನೀರು ಪೋಲಾಗುತ್ತಿದೆ.
ಇನ್ನೊಂದೆಡೆ ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ನೀರು ಸಮರ್ಪಕವಾಗಿ ಪೂರೈಕೆಯಾಗದ ಕಾರಣ ಜನ ಒದ್ದಾಡುವಂತಾಗಿದೆ. ನೀರು ಸಂಗ್ರಹಣೆ ಬಗ್ಗೆ ಅರಿವಿಲ್ಲ ದಿರುವುದೇ ನೀರಿನ ಕೊರತೆ ಮತ್ತು ಪ್ರವಾಹ ಸಮಸ್ಯೆಗಳಿಗೆ ಕಾರಣ. ಒಂದೆಡೆ ನದಿಗಳ ನೀರನ್ನು ಕಲುಷಿತಗೊಳಿಸುತ್ತಿದ್ದೇವೆ. ಅದೇ ನೀರನ್ನು ದೂರದಿಂದ ತಂದು ಕುಡಿಯಲು ಪೂರೈಸುತ್ತಿದ್ದೇವೆ. ಲೀಟರ್ ಬಾಟಲಿ ನೀರಿಗೆ ೨೦ ರುಪಾಯಿ ಕೊಟ್ಟು ಕುಡಿಯು ತ್ತಿದ್ದೇವೆ. ಆದರೆ ಮನೆ ತಾರಸಿ ಮೇಲೆ ಬೀಳುವ ಪರಿಶುದ್ಧ ಮಳೆ ನೀರನ್ನು ಸಂಗ್ರಹಿಸಿ ಬಳಕೆ ಮಾಡಲು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ.
ನಗರದಲ್ಲಿರುವ ರಾಜಕಾಲುವೆಗಳು ಕಬಳಿಕೆ ಆಗಿವೆ, ಕೆರೆಗಳಿದ್ದ ಜಾಗಗಳೆಲ್ಲ ಬಡಾವಣೆಗಳಾಗಿವೆ. ಅಭಿವೃದ್ಧಿ ಹೆಸರಿನಲ್ಲಿ ನಗರದ ಬಹುತೇಕ ಕಡೆ ಮರಗಳ ಮಾರಣಹೋಮ ಆಗಿದೆ. ಹಚ್ಚ ಹಸಿರಿನ ನಡುವೆ ನಿರ್ಮಾಣವಾದ ನಗರ ಇದೀಗ ಕಾಂಕ್ರೀಟ್ ಕಾಡಾಗಿದೆ. ಹಾಗಾಗಿ ಮಳೆನೀರು ಭೂಮಿಯಲ್ಲಿ ಇಂಗದೆ ಪ್ರವಾಹಕ್ಕೆ ಕಾರಣವಾಗುತ್ತಿದೆ. ಮಳೆನೀರು ಸಂಗ್ರಹಕ್ಕಾಗಿ ಸರಕಾರವೂ ಯೋಜನೆಗಳನ್ನು ಜಾರಿ ಮಾಡಿವೆ ಯಾದರೂ ಯಾವೊಂದು ಯೋಜನೆಯೂ ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ಹೀಗಾಗಿಯೇ ನೀರಿನ ದಂಧೆ ಕೋರರು ನಿರಂತರವಾಗಿ ಹಣ ದೋಚುತ್ತಿದ್ದಾರೆ.
ಬೆಂಗಳೂರಿನಲ್ಲಿ ವರ್ಷವೊಂದಕ್ಕೆ ಸರಾಸರಿ 100 ದಿನ ಮಳೆಯಾಗುತ್ತದೆ. ಆ ನೀರನ್ನೆಲ್ಲ ಮಳೆ ನೀರು ಕೊಯ್ಲು ಮೂಲಕ ಹಿಡಿದಿಟ್ಟು ಬಳಕೆ ಮಾಡಿದರೆ ನಗರಕ್ಕೆ ನೀರಿನ ಬರವೇ ಬರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಮಳೆ ನೀರು ಕೊಯ್ಲು ಗಳನ್ನು ಅಳವಡಿಸಿಕೊಂಡು ಪೋಲಾಗುತ್ತಿರುವ ಜೀವಜನವನ್ನು ಸಂರಕ್ಷಿಸಿ, ಮರುಬಳಕೆ ಮಾಡಿಕೊಳ್ಳಬೇಕಿದೆ. ಇನ್ನೊಂದೆಡೆ ಕೆರೆ ಒತ್ತುವರಿಗಳನ್ನು ತೆರವುಗೊಳಿಸಿ, ಪುನಃ ಕೆರೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವ ಮೂಲಕ ನಗರದ ಸೌಂದರ್ಯವನ್ನು ಕಾಪಾಡ ಬೇಕಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಲeನದ ಕುರಿತು ಇನ್ನಷ್ಟು ಅರಿವು ಮೂಡಿಸುವ ಕಾರ್ಯಕ್ರಮ ಗಳನ್ನು ಆಯೋಜಿಸಬೇಕಿದೆ.