ಈಗೊಂದು ವಾರದಿಂದ ಆಗೀಗ ಮಳೆ ಸುರಿಯುತ್ತಿರುವುದರಿಂದ ಎಲ್ಲರೂ ತಣ್ಣಗೆ ಇದ್ದೇವೆ. ಆದರೆ, ರಾಜ್ಯದಲ್ಲಿ ನೀರಿನ ಸನ್ನಿವೇಶ
ಇಷ್ಟೊಂದು ತಣ್ಣಗೆ ಉಳಿದಿಲ್ಲ. ಊಹೆಗೂ ಮೀರಿ ಕೆರೆ-ಕಟ್ಟೆಗಳಾದಿಯಾಗಿ ಮೇಲ್ಮೈನ ಜಲಮೂಲಗಳೆಲ್ಲವೂ ಬತ್ತಿ ಹೋಗುತ್ತಿವೆ.
ಸಹಜವಾಗಿ ಅಂತರ್ಜಲವೂ ಕುಸಿಯುತ್ತಿದೆ. ಒಂದೆಡೆ ವಿಪರೀತ ಬಾಧಿಸುತ್ತಿರುವ ಬಿಸಿಲು ಹಾಗೂ ದಿನದಿಂದ ದಿನಕ್ಕೆ ಏರುತ್ತಿರುವ ಕಾವು. ಇನ್ನೊಂದೆಡೆ ಸಹಜವಾಗಿ ಹೆಚ್ಚಿದ ನೀರಿನ ಬಳಕೆ. ಇದರ ನಡುವೆಯೇ ಮುಂಗಾರು ಪೂರ್ವ ಮಳೆ ಕೊರತೆಯೂ ರಾಜ್ಯ ವನ್ನು ಕಾಡು ತ್ತಿದೆ. ಪರಿಣಾಮ ರಾಜ್ಯಾದ್ಯಂತ ಜಲಾಶಯಗಳಲ್ಲಿ ನೀರಿನ ಮಟ್ಟ ಅತ್ಯಂತ ವೇಗವಾಗಿ ಕುಸಿಯುತ್ತಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ-ಕೆಎಸ್‌ಎನ್‌ಡಿಎಂಸಿ ಬಹಿರಂಗಪಡಿಸಿರುವ ವರದಿ ನಿಜಕ್ಕೂ ಆತಂಕಕಾರಿಯಾಗಿದೆ. ಅದರ ಪ್ರಕಾರ, ಈಗಾಗಲೇ ರಾಜ್ಯದ ಪ್ರಮುಖ ೧೩ ಜಲಾಶಯಗಳಲ್ಲಿ ನೀರಿನ ಮಟ್ಟ ಸರಾಸರಿ ಶೇ.೨೭ಕ್ಕೆ ಕುಸಿದಿದೆ. ಪ್ರಮುಖ ಜಲಾನಯನ ಪ್ರದೇಶಗಳಲ್ಲಿ ಬೇಸಿಗೆ ಮಳೆಯ ಕೊರತೆಯೇ ಇದಕ್ಕೆ ಕಾರಣ. ವಾಡಿಕೆಯಂತೆ ವರ್ಷಾರಂಭ ದಿಂದ ಮೇ ಕೊನೆಯ ವೇಳೆಗೆ ಕನಿಷ್ಠ ೧೨೯ ಮಿಮೀ ಸಾಮಾನ್ಯ ಪೂರ್ವ ಮುಂಗಾರು ಮಳೆಯಾಗಬೇಕಿತ್ತು.
ಆದರೆ ರಾಜ್ಯದಲ್ಲಿ ಈವರೆಗೆ ಆಗಿರುವುದು ಕೇವಲ ೩೯.೭ಮಿಮೀ ಮಳೆ. ಇನ್ನೂ ಗಮನಾರ್ಹ ಸಂಗತಿಯೆಂದರೆ ಈ ಅವಧಿಯಲ್ಲಿ ರಾಜ್ಯದಲ್ಲಿ ಆಗಬೇಕಿದ್ದ ಸಾಮಾನ್ಯ ಮಳೆ ಪ್ರಮಾಣ ೪೮ ಮಿಮೀ ಬದಲಿಗೆ ಕೇವಲ ೪೦ ಮಿಮೀ ಮಳೆಯಾಗಿದೆ. ಇದರಿಂದ ತರಕಾರಿ ಸೇರಿದಂತೆ ಬೇಸಿಗೆ ಬೆಳೆಗಳಿಗೆ ನೀರಿನ ಕೊರತೆಯಾಗಿದ್ದು, ಅಂತರ್ಜಲದ ಮೇಲಿನ ಕೃಷಿಕರ ಅವಲಂಬನೆ ಹೆಚ್ಚಿದೆ. ಇದು ಹೀಗೆಯೇ ಮುಂದುವರಿದಲ್ಲಿ, ಇನ್ನು ಹದಿನೈದು ದಿನಗಳಲ್ಲಿ ರಾಜ್ಯ ತೀವ್ರ ಬರಗಾಲ ಹಾಗೂ ಕಗ್ಗತ್ತಲೆಯ ಸಮಸ್ಯೆಯನ್ನು ಎದುರಿಸಬೇಕಾಗಿ ಬರುವ ಅಪಾಯವಿದೆ. ಈಗ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಓಲೈಕೆಗಾಗಿ, ಎಲ್ಲವೂ ರಾಜ್ಯದಲ್ಲಿ ಸುಭಿಕ್ಷವಾಗಿದೆಯೆಂದು ತೋರಿಸಿಕೊಳ್ಳುವುದು ಸರಕಾರ ಹಾಗೂ ಆಯಾ ಕ್ಷೇತ್ರದ ಜನಪ್ರತಿನಿಧಿಗಳಿಗೆ ಅನಿವಾರ್ಯ.
ಹೀಗಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ವಾಸ್ತವವನ್ನು ಮುಚ್ಚಿಟ್ಟು ನೀರು ಹಾಗೂ ವಿದ್ಯುತ್ ಅನ್ನು ಧಾರಾಳವಾಗಿ ಪೂರೈಸ ಲಾಗುತ್ತಿದೆ. ಕೆಎಸ್‌ಎನ್ ಡಿಎಂಸಿ ವರದಿಯ ಪ್ರಕಾರವೇ ಪ್ರಸ್ತುತ ರಾಜ್ಯದ ಜಲಾಶಯಗಳ ಜಲ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಶೇ.೨೮ರಷ್ಟು ಮಾತ್ರ ಇದೆ. ಜಲಾಶಯಗಳಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ ೯೦.೪೧ ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಈ ಬಾರಿ ೮೩.೫೫ ಟಿಎಂಸಿ ನೀರು ಸಂಗ್ರಹವಾಗಿದೆ. ರಾಜಕಾರಣಿಗಳಂತೂ ಸಮೃದ್ಧಿಯ ಸೋಗು ಹಾಕಿ, ಜನರ ಕಣ್ಣಿಗೆ ಮಣ್ಣೆರಚಿ ತಮ್ಮ ಮತಬೇಟೆಯ ಭರದಲ್ಲಿದ್ದಾರೆ.
ಆದರೆ ರಾಜ್ಯದ ಜನತೆ ಜಾಗೃತರಾಗಿ, ಈಗಲೇ ಎಚ್ಚೆತ್ತು ನೀರು ಹಾಗೂ ವಿದ್ಯುತ್‌ನ ಮಿತಬಳಕೆಗೆ ಮುಂದಾಗದಿದ್ದಲ್ಲಿ ತೀವ್ರ ಸಂಕಷ್ಟಕ್ಕೆ ಬೀಳುವುದರಲ್ಲಿ ಸಂಶಯವಿಲ್ಲ. ಪುಣ್ಯಕ್ಕೆ ಎರಡು ದಿನದಿಂದ ಚೆನ್ನಾಗಿ ಮಳೆಯಾಗುತ್ತಿದೆ. ಇನ್ನಷ್ಟು ಆಗಲಿ ಎಂಬ ಹಾರೈಕೆಯ ಜತೆ ನೀರಿನ ವಿಚಾರದಲ್ಲಿ ಮೈಮರೆವಿಂದ ಹೊರ ಬರೋಣ.