Saturday, 14th December 2024

ಬೆಂಗಳೂರಲ್ಲ, ಬಿಸಿಲೂರು!

‘ಭಾರತದ ಉದ್ಯಾನ ನಗರಿ’ ಇದು ಒಂದು ಕಾಲಕ್ಕೆ ಬೆಂಗಳೂರಿಗೆ ಸಿಕ್ಕಿದ್ದ ಮೆಚ್ಚುಗೆಯ ಅಭಿದಾನ. ಹೆಸರಿಗೆ ತಕ್ಕಂತೆ ಹಿಂದೆ ಮರ-ಗಿಡಗಳಿಂದ ನಳನಳಿಸುತ್ತಿದ್ದ ಬೆಂಗಳೂರು, ಬಹುತೇಕರ ಪಾಲಿಗೆ ವಿಹಾರ-ವಿರಾಮದ ತಾಣವೂ ಆಗಿತ್ತು. ಆದರೆ ರಿಯಲ್ ಎಸ್ಟೇಟ್ ವಲಯ ವಿಸ್ತರಿಸುತ್ತಾ ಹೋದಂತೆ ಹಾಗೂ ವಲಸಿಗರು ದಾಂಗುಡಿಯಿಡುವುದು ಹೆಚ್ಚಾದಂತೆ ಜನವಸತಿ ಕಲ್ಪಿಸಲೆಂದು ಅಪಾರ್ಟ್‌ಮೆಂಟುಗಳ ನಿರ್ಮಾಣ, ರಸ್ತೆಗಳ ಅಗಲೀಕರಣ ಅನಿವಾರ್ಯವಾದವು. ಆದರೆ ಈ ಆಶಯದ ನೆರವೇರಿಕೆಗೆ ಬಲಿಯಾಗಿದ್ದು ಮಹಾನಗರಿಯ ಅಸಂಖ್ಯಾತ ಮರಗಳು.

ಪರಿಣಾಮ ‘ಉದ್ಯಾನ ನಗರಿ’ ಎಂಬ ಹೆಸರು ಮಾಯವಾಗಿ, ‘ಕಾಂಕ್ರೀಟ್ ಜಂಗಲ್’ ಎಂಬ ಹಣೆಪಟ್ಟಿಯನ್ನು ಲಗತ್ತಿಸಿಕೊಳ್ಳಬೇಕಾಗಿ ಬಂತು ಬೆಂಗಳೂರು. ಆ ಸ್ಥಿತಿಯೀಗ ಮತ್ತಷ್ಟು ಹದಗೆಟ್ಟು ಬೆಂಗಳೂರು ಈಗ ಅಕ್ಷರಶಃ ‘ಬೆಂದಕಾಳೂರು’ ಆಗಿಬಿಟ್ಟಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಬೆಂಗಳೂರಿನ ಈ ವರ್ಷದ ಬಿಸಿಲಿನ ತಾಪವು ಹಳೆಯ ಎಲ್ಲ ದಾಖಲೆಗಳನ್ನು ಮುರಿದಿದೆಯಂತೆ. ಕಳೆದ ಕೆಲವು ದಿನಗಳಲ್ಲಿ ಮಹಾನಗರಿಯ ಹಗಲಿನ ತಾಪಮಾನವು ೩೮ ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿರುವುದು ಇದಕ್ಕೆ ಸಾಕ್ಷಿ. ಪ್ರಾಕೃತಿಕವಾಗಿ ಒದಗುವ ಕೆಲ ಸ್ಥಿತಿಗತಿಗಳನ್ನು ಹುಲುಮಾನವರು ಬದಲಿಸಲಾಗದು, ತಡೆಯಲಾಗದು ಎಂಬುದೇನೋ ನಿಜವೇ. ಆದರೆ ಅಂಥ ಪರಿಸ್ಥಿತಿ ಒದಗಿದ್ದಕ್ಕೆ ನಮ್ಮ ಕೊಡುಗೆಯೆಷ್ಟು ಎಂಬ ಆತ್ಮಾವಲೋಕನವನ್ನೂ ನಾವು ಮಾಡಿಕೊಳ್ಳಬೇಕಲ್ಲವೇ? ಅಭಿವೃದ್ಧಿಯೊಂದನ್ನೇ ಮುಖ್ಯ ಕಾರ್ಯಸೂಚಿ ಯಾಗಿಟ್ಟುಕೊಂಡು ಮನಬಂದಂತೆ ಮರಗಳನ್ನು ಕಡಿಯುತ್ತ ಹೋದದ್ದರ ಹಾಗೂ ಗಗನಚುಂಬಿ ಕಟ್ಟಡಗಳಿಗೆ ಬೇಕಾಬಿಟ್ಟಿ ಅನುಮತಿಸಿದ್ದರ ಪರಿಣಾಮ ತಾಪಮಾನ ಹೀಗೆ ತಾರಕಕ್ಕೆ ಏರುವಂತಾಗಿದೆ.

ಇಷ್ಟು ಸಾಲದೆಂಬಂತೆ ಬೆಂಗಳೂರಿನಲ್ಲಿ ಈಗಾಗಲೇ ಜಲಸಂಕಷ್ಟ ಎದುರಾಗಿದೆ. ಕೆಲ ಬಡಾವಣೆಗಳಲ್ಲಿ ಬೋರ್‌ವೆಲ್‌ಗಳಲ್ಲೂ ನೀರು ಸಿಗುತ್ತಿಲ್ಲ, ಸಿಕ್ಕರೂ ಫ್ಲೋರೈಡ್ ಪದರ ಅದರಲ್ಲಿ ಕಟ್ಟಿಕೊಂಡಿರುತ್ತದೆ ಎಂಬುದು ಕಹಿಸತ್ಯ. ಮಳೆನೀರು ಕೊಯ್ಲು, ಗಿಡಮರ ಗಳನ್ನು ಬೆಳೆಸುವಿಕೆ ಸೇರಿದಂತೆ ಸಾಧ್ಯವಾದ ಎಲ್ಲ
ಉಪಕ್ರಮಗಳಿಗೆ ಈಗಿಂದೀ ಗಲೇ ಮುಂದಾಗದಿದ್ದರೆ, ಕೆಲವೇ ದಿನಗಳಲ್ಲಿ ಬೆಂಗಳೂರಿನ ತಾಪಮಾನ ಮತ್ತು ನೀರಿಗಾಗಿನ ಹಾಹಾಕಾರ ಅಸಹನೀಯ
ಮಟ್ಟಕ್ಕೇರುವುದು ಕಟ್ಟಿಟ್ಟ ಬುತ್ತಿ. ಆಳುಗರು ಈ ಗಂಭೀರ ಪರಿಸ್ಥಿತಿಯನ್ನು ನಿರ್ಲಕ್ಷಿಸದಿರಲಿ.