೨೦೨೩ ಎಂಬ ವರ್ಷ ಕಾಲಗರ್ಭದೊಳಗೆ ಲೀನವಾಗಿದೆ. ಹೊಸ ಉಲ್ಲಾಸ, ಹೊಸ ನಿರೀಕ್ಷೆ, ಹೊಸ ಉತ್ಸಾಹದೊಂದಿಗೆ ನಾವೆಲ್ಲರೂ ೨೦೨೪ ಹೊಸ ವರ್ಷವನ್ನು ಬರಮಾಡಿಕೊಂಡಾಗಿದೆ. ಮೇಲ್ನೋಟಕ್ಕೆ ಹೊಸ ವರ್ಷ ಎನ್ನುವುದು ಗೋಡೆಯ ಮೇಲೆ ಕ್ಯಾಲೆಂಡರ್ ಬದಲಿಸುವುದಕ್ಕಷ್ಟೇ ಸೀಮಿತ. ಆದರೆ, ಅಲೌಕಿಕವಾಗಿ, ಭಾವನಾತ್ಮಕವಾಗಿ, ಸಂಕಲ್ಪಗಳ ದೃಷ್ಟಿಯಿಂದ ಹೊಸ ವರ್ಷ ಎನ್ನುವುದು ನಿಜಕ್ಕೂ ಹೊಸದೇ. ಪ್ರತಿ ವರ್ಷ ಕೆಡಕು-ಒಳಿತು ಇದ್ದೇ ಇರುತ್ತದೆ. ಆದರೆ, ನಾವೆಲ್ಲರೂ ಮುಂಬರುವ ವರ್ಷ ಸಂಪೂರ್ಣವಾಗಿ ಹರ್ಷವನ್ನೇ ತರಲಿ ಎಂದು ಆಶಿಸುತ್ತೇವೆ. ಆ ಕಾರಣಕ್ಕಾಗಿಯೇ, ೨೦೨೪ ಕೂಡ ನಮ್ಮೆಲ್ಲರ ಪಾಲಿಗೆ ಶಾಂತಿ, ಸಮೃದ್ಧಿ ಮತ್ತು ನೆಮ್ಮದಿಯನ್ನೇ ಹೊತ್ತು ತರಲಿ. ಎಡೆಯೂ ಸಂತೋಷವೇ ತುಂಬಿರಲಿ.
ಇಡೀ ಮನುಕುಲಕ್ಕೆ ಕಂಟಕವಾಗಿದ್ದ ಕರೋನಾ ಮಹಾಮಾರಿ ಕಳೆದ ವರ್ಷ ಸಂಪೂರ್ಣವಾಗಿ ತಣ್ಣಗಾಗಿತ್ತು. ಆದರೆ ಇದೀಗ ಮತ್ತೆ ಉಲ್ಬಣವಾಗುತ್ತಿದ್ದು, ಹೊಸ ವರ್ಷದ ಆರಂಭದಲ್ಲೇ ಈ ವೈರಸ್ ನಾಮಾವಶೇಷವಾಗಲಿ ಎಂದು ಆಶಿಸೋಣ. ೨೦೨೪ರಲ್ಲಿ ಲೋಕಸಭೆ ಚುನಾವಣೆಯೂ ನಡೆಯಲಿದ್ದು, ದೇಶದಲ್ಲಿ ಸುಭದ್ರ, ಜನಪರವಾದ ಸರಕಾರವೊಂದು ರಚನೆಯಾಗಲಿ ಎಂದು ಆಶಿಸೋಣ. ಕಳೆದ ವರ್ಷದಲ್ಲಿ ತೈಲ ದರಗಳು ಗಗನಮುಖಿಯಾಗಿವೆ. ನಿತ್ಯದ ಅಗತ್ಯ ವಸ್ತುಗಳ ದರಗಳು ಬಡವರು ಮತ್ತು ಸಾಮಾನ್ಯ ಜನರನ್ನು ವಿಚಲಿತ ಮಾಡಿವೆ. ಹೊಸ ವರ್ಷದಲ್ಲಿ ಅಗತ್ಯ ಆಹಾರ ಪದಾರ್ಥಗಳು, ತೈಲ ದರಗಳು ಇಳಿಕೆ ಯಾಗಿ, ಸಾಮಾನ್ಯರ ಬದುಕು ಸುಲಭವಾಗಲಿ.
೨೦೨೩ರಲ್ಲಿ ಕರ್ನಾಟಕವು ವಿಧಾನಸಭೆ ಚುನಾವಣೆ ಎದುರಿಸಿದ್ದರಿಂದ ರಾಜಕೀಯ ಪಕ್ಷಗಳ ನಡುವೆ ವೈಮನಸ್ಸು, ದ್ವೇಷ, ವಾಕ್ಸಮರ ತಾರಕಕ್ಕೇರಿ, ಜನರಲ್ಲಿ
ರಾಜಕೀಯದ ಬಗ್ಗೆ ಅಸಹ್ಯ ಹುಟ್ಟಿಸುವಂತೆ ಮಾಡಿದೆ. ೨೦೨೪ರಲ್ಲಿ ಮೌಲ್ಯಾಧಾರಿತ ರಾಜಕಾರಣ ಮುಂದುವರಿಯಲಿ. ರಾಜಕೀಯ ಜಿದ್ದಾಜಿದ್ದಿ ಆರೋಗ್ಯಕರ ವಾಗಿರಲಿ. ಭಾರಿ ಬಹುಮತದಿಂದ ಅಽಕಾರಕ್ಕೆ ಬಂದ ಸರಕಾರವು ಅಭಿವೃದ್ಧಿ ಕೇಂದ್ರೀತವಾಗಿರಲಿ. ಇನ್ನು ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ, ಸಿನಿಮಾ, ಕ್ರೀಡಾ ಕ್ಷೇತ್ರಗಳಲ್ಲೂ ಕಳೆದ ವರ್ಷ ಸಾಕಷ್ಟು ಮೈಲುಗಲ್ಲು ಗಳನ್ನು ನೆಟ್ಟಾಗಿದೆ. ಹೊಸ ವರ್ಷದಲ್ಲೂ ಅದು ಮುಂದುವರಿಯಲಿ. ಗತಿಸಿ ಹೋದ ಕಹಿ ಘಟನೆಗಳನ್ನು ಮರೆತು, ಸಿಹಿ ಸಂಗತಿಗಳ ಆಶಯಯೊಂದಿಗೆ ೨೦೨೪ರ ಹೊಸ ವರ್ಷವನ್ನು ಸ್ವಾಗತಿಸೋಣ. ಎಲ್ಲರಿಗೂ ಶುಭವಾಗಲಿ.