Monday, 4th November 2024

ದೌರ್ಜನ್ಯ ನಿಂತರೆ ಮಾತ್ರ ಮಹಿಳಾ ದಿನಾಚರಣೆ ಅರ್ಥ

ಇಂದು ಮಹಿಳಾ ದಿನಾಚರಣೆ. ದೇಶಾದ್ಯಂತ ಮಹಿಳಾ ದಿನಾಚರಣೆಯ ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ. ಮಹಿಳೆಯರ ಸಾಧನೆಗಳನ್ನು ಹಾಡಿ ಹೊಗಳಲಾ ಗುತ್ತದೆ.

ಒಂದೆಡೆ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸಿನಿಂದ ಮುನ್ನುಗ್ಗುತ್ತಿರುವ ಮಹಿಳೆ, ಇನ್ನೊಂದೆಡೆ ಕೌಟುಂಬಿಕ ದೌರ್ಜನ್ಯ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ಅತ್ಯಾಚಾರ, ಆಸಿಡ್ ದಾಳಿ, ಅಶ್ಲೀಲ ವಿಡಿಯೊ ಪ್ರಚಾರ, ವರದಕ್ಷಿಣೆಗಾಗಿ ಹಿಂಸೆ… ಹೀಗೆ ವರ್ಷ ವರ್ಷಕ್ಕೂ ಹೆಚ್ಚುತ್ತಿರುವ ಮಹಿಳೆಯರ ಮೇಲಿನ
ದೌರ್ಜನ್ಯಗಳು. ಇದು ದೇಶದ ಇಂದಿನ ಸ್ಥಿತಿ. ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹೆಣ್ಣುಮಕ್ಕಳ ಮೇಲಿನ ವಿವಿಧ ಬಗೆಯ ದೌರ್ಜನ್ಯಗಳು ಮಾತ್ರ ಆಘಾತಕಾರಿ ಎನಿಸುವಷ್ಟು ಪ್ರಮಾಣದಲ್ಲಿ ಸದ್ದಿಲ್ಲದೇ ಏರುತ್ತಿವೆ. ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರುತ್ತಿದೆ.

ಈಗ ಭಾರತದಲ್ಲಿ ಪ್ರತೀ ೧೫ ನಿಮಿಷಕ್ಕೊಬ್ಬ ಹೆಣ್ಣುಮಗಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾಳೆ. ಕಳೆದೊಂದು ದಶಕದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ವರದಿಗಳು ಹೇಳುತ್ತವೆ. ಮಹಿಳೆಯರ ಮೇಲಿನ ದೌರ್ಜನ್ಯ ಭಾರತದ ಅತಿ ಹೆಚ್ಚು ಎಂದು ಅನೇಕ ವರದಿಗಳು ಗುರುತಿಸಿವೆ. ಅಫ್ಘಾನಿಸ್ತಾನ ಹಾಗೂ ಸಿರಿಯಾಗಳನ್ನೂ ಈ ವಿಷಯದಲ್ಲಿ ಮೀರಿಸಿದೆ ಎನ್ನಲಾಗಿದೆ.

ಮಹಿಳೆಯರ ವಿರುದ್ಧದ ಹಿಂಸೆಗಳಿಗೆ ಮಾನಸಿಕ ಅಸ್ವಸ್ಥತೆ, ಪುರುಷ ಅಹಂಕಾರ, ಮಹಿಳೆಯರ ಅಸಹಾಯಕತೆ… ಹೀಗೆ ಏನೇ ಕಾರಣಗಳಿರಲಿ, ದೇಶದಲ್ಲಿ ಜಾರಿಯಲ್ಲಿರುವ ಕಾನೂನುಗಳು ಪರಿಣಾಮಕಾರಿಯಾಗಿಲ್ಲ ಎಂಬ ಅಂಶ ಸ್ಪಷ್ಟ. ಇಂದು ದೇಶದ ಮಹಿಳೆಯರ ಸ್ಥಿತಿಗತಿ ಬಗ್ಗೆ ಚಿಂತಿಸಿದರೆ, ವಿಷಾದ ಭಾವ ಕವಿಯುತ್ತದೆ. ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶ, ಲಿಂಗ ಸಮಾನತೆಯನ್ನು ಎತ್ತಿಹಿಡಿಯುವುದು, ಜತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದಾಗಿದೆ.

ಅಂದರೆ ಮಹಿಳೆಯರಿಗೆ ಈ ಜಗತ್ತನ್ನು ಉತ್ತಮ ಮತ್ತು ಸುರಕ್ಷಿತ ಸ್ಥಳವನ್ನಾಗಿ ಬದಲಾಯಿಸಬೇಕಿರುವುದು. ಆದರೆ ವಾಸ್ತವದಲ್ಲಿ ಅದು ಆಗುತ್ತಿಲ್ಲ. ಇಂಥ ಗಂಭೀರ ಸಾಮಾಜಿಕ ಪಿಡುಗು ನಿವಾರಣೆಗೆ ಸಮಾಜದ ಎಲ್ಲ ವರ್ಗಗಳಿಂದ ಸ್ಪಂದನೆ ವ್ಯಕ್ತವಾಗಬೇಕಿದೆ. ಪಿಡುಗು ನಿವಾರಣೆಗೆ ಪರಿಹಾರೋ ಪಾಯವನ್ನು ತಜ್ಞರ ಸಹಾಯದಿಂದ ರೂಪಿಸಬೇಕಿದೆ. ಇಂತಹ ಸುರಕ್ಷಿತ ವಾತಾವರಣ ನಿರ್ಮಿಸಿದಲ್ಲಿ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ.