Saturday, 14th December 2024

ವಿಶ್ವ ಜಲ ದಿನ ಆಂದೋಲನವಾಗಲಿ

ಪ್ರಪಂಚದಾದ್ಯಂತ ಮಾ.22ನ್ನು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ. ಇದೊಂದು ಆಚರಣೆಯಷ್ಟೆ ಎಂಬುದಾಗಿಯೇ
ಭಾವಿಸಿರುವುದರಿಂದ ಇಂದಿಗೂ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.

ಪ್ರತಿ ವರ್ಷ ಒಂದೊಂದು ಆಶಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಆದರೆ ಆ ಆಶಯಗಳು ಯಾವ ಪ್ರಮಾಣದಲ್ಲಿ
ಅನುಷ್ಠಾನಗೊಂಡಿವೆ ಎಂಬುದು ಮುಖ್ಯ. ಪ್ರತಿಯೊಬ್ಬರೂ ವಿಶ್ವ ಜಲದಿನವನ್ನು ನೀರಿನ ಸಮಸ್ಯೆಗಳನ್ನು ಅವಲೋಕಿಸಲು ಇರುವ ಒಂದು ಮಹತ್ವದ ದಿನ ಎಂದು ಭಾವಿಸಿ, ಅನುಷ್ಠಾನಕ್ಕೆ ಮುಂದಾದರೆ ಮಾತ್ರವೇ ನೀರಿನ ಸಮಸ್ಯೆಗಳ ನಿರ್ಮೂಲನೆ ಸಾಧ್ಯ.

ವಿಶ್ವ ಜಲ ದಿನದ ಸ್ಥಾಪನೆ, ಆಚರಣೆಗೂ ಮಹತ್ವ. ಭೂಮಿಯ ಶೇ.70ಭಾಗ ನೀರನ್ನು ಒಳಗೊಂಡಿದ್ದರೂ ನಾವು ನೀರಿನ ಸಮಸ್ಯೆ ಗಳನ್ನು ಅನುಭವಿಸುತ್ತಿದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ನಿರ್ವಹಣೆಯ ಕೊರತೆ. ಲಭ್ಯವಿರುವ ನೀರನ್ನು ಶುದ್ಧವಾಗಿರಿಸಿ ಕೊಳ್ಳದಿರುವುದೇ ನೀರಿನ ಸಮಸ್ಯೆಗಳಿಗೆ ಮೂಲ ಕಾರಣ. ರಾಜ್ಯದಲ್ಲಿ ಪ್ರತಿ ವರ್ಷ ನೂರಕ್ಕೂ ಅಧಿಕ ತಾಲೂಕು ಗಳಲ್ಲಿ ನೀರಿನ ಸಮಸ್ಯೆ ಇದೆ. ಎರಡು ಸಾವಿರಕ್ಕೂ ಅಧಿಕ ಜನವಸತಿ ಪ್ರದೇಶಗಳು ನೀರಿನ ಸಮಸ್ಯೆ ಎದುರಿಸುತ್ತವೆ ಎಂಬುದು ನಿಜಕ್ಕೂ ವಿಷಾಧನೀಯ ಸಂಗತಿ.

ನೀರಿನ ನಿರ್ವಹಣೆ ಎಂಬುದು ಸರಕಾರಗಳ ಜವಾಬ್ದಾರಿ ಎಂಬುದಾಗಿ ಭಾವಿಸಿರುವುದರಿಂದಾಗಿಯೇ ಅಭಾವ ಸೃಷ್ಟಿಯಾಗುತ್ತಿದೆ. ಪ್ರಾಕೃತಿಕವಾಗಿ ಲಭ್ಯವಾಗುವ ನೀರಿನ ಸಂಗ್ರಹಣೆ, ಶುದ್ಧೀಕರಣ, ಸಮರ್ಪಕ ಬಳಕೆ ಬಗ್ಗೆ ಜನರಲ್ಲಿ ಬಹಳಷ್ಟು ಜಾಗೃತಿ ಮೂಡ ಬೇಕಾದ ಅಗತ್ಯವಿದೆ. ಇಂಥದೊಂದು ಬೆಳವಣಿಗೆಗೆ ವಿಶ್ವ ಜಲ ದಿನ ವೇದಿಕೆಯಾಗಬೇಕು. ಆದರೆ ಜಲ ಸಂರಕ್ಷಣೆಯಲ್ಲಿ ಜನರ ಪಾಲ್ಗೊಳ್ಳುವಿಕೆಯ ಕೊರತೆಯೂ ಜಲ ಸಮಸ್ಯೆಗಳ ಹೆಚ್ಚಳಕ್ಕೆ ಪ್ರಮುಖ ಕಾರಣ.

ಪ್ರತಿಯೊಂದು ಪ್ರಾಣಿ ಹಾಗೂ ಮನುಷ್ಯರಿಗೆ ಅವಶ್ಯವಾಗಿರುವ ನೀರಿನ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ದೇಶದಲ್ಲಿ ಸ್ವಚ್ಛ ಭಾರತದ ಮಾದರಿ ಮತ್ತೊಂದು ಮಹತ್ವ ಆಂದೋಲನ ರೂಪುಗೊಳ್ಳಬೇಕಿರುವುದು ಇಂದಿನ ಅಗತ್ಯ.