Friday, 19th August 2022

ಉಪರಾಷ್ಟ್ರಪತಿ ಮತದಾನ ಅಂತ್ಯ: ಫಲಿತಾಂಶಕ್ಕೆ ಕ್ಷಣಗಣನೆ

ನವದೆಹಲಿ: ಉಪರಾಷ್ಟ್ರಪತಿ ಆಯ್ಕೆಗಾಗಿ ಶನಿವಾರ ನಡೆದ ಚುನಾವಣೆಯ ಮತದಾನ ಅಂತ್ಯಗೊಂಡಿದ್ದು, ಸಂಜೆ ಆರು ಗಂಟೆಗೆ ಮತ ಎಣಿಕೆ ನಡೆಯಲಿದೆ. ಬಳಿಕ ಫಲಿತಾಂಶ ಘೋಷಣೆಯಾಗಲಿದೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎಯಿಂದ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನ್ಕರ್ ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ಅವರು ಕಣದಲ್ಲಿದ್ದಾರೆ.

ಕೇವಲ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಮಾತ್ರ ಮತ ಹಾಕುವುದರಿಂದ ಇಲ್ಲಿ ಧನ್ಕರ್ ಗೆಲುವು ನಿಶ್ಚಿತವಾಗಿದೆ. ಏಕೆಂದರೆ ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಎನ್ ಡಿಎ ಹೆಚ್ಚು ಸ್ಥಾನ ಹೊಂದಿದೆ. ಲೋಕಸಭೆ ಮತ್ತು ರಾಜ್ಯಸಭೆ ಸೇರಿಸಿ ಒಟ್ಟು 788 ಮತಗಳಿವೆ. ಅದರಲ್ಲಿ 725 ಸಂಸದರು ಮತ ಚಲಾಯಿಸಿದ್ದಾರೆ. ಎನ್ ಡಿಎ ಎರಡನ್ನೂ ಸೇರಿಸಿದರೆ 510 ಮತಗಳನ್ನು ಹೊಂದಿದೆ. ಪ್ರತಿಪಕ್ಷಗಳ ಬಳಿ 200 ಮತಗಳಿವೆ.

ಆದರೆ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹಳಷ್ಟು ಅಡ್ಡಮತಗಳಾಗಿದ್ದು, ಇಲ್ಲೂ ಅದೇ ರೀತಿ ಮುಂದುವರಿದರೆ ಪ್ರತಿಪಕ್ಷಗಳ ಅಭ್ಯರ್ಥಿಯ ಮತಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.